ನವದೆಹಲಿ (PTI): ರಾಷ್ಟ್ರ ರಾಜಧಾನಿಯಲ್ಲಿ ₹30 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಎಲ್ಲ ವಿದ್ಯುತ್‌ಚಾಲಿತ ಕಾರುಗಳಿಗೆ 2030ರ ಮಾರ್ಚ್ 31ರವರೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ಶೇಕಡ 100ರಷ್ಟು ವಿನಾಯಿತಿ ನೀಡುವ ಕುರಿತು ದೆಹಲಿ ಸರ್ಕಾರ ಶನಿವಾರ ಬಿಡುಗಡೆ ಮಾಡಿದ ವಿದ್ಯುತ್‌ಚಾಲಿತ ವಾಹನ (ಇ.ವಿ) ನೀತಿಯ ಹೊಸ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
'ದೆಹಲಿ ವಿದ್ಯುತ್‌ಚಾಲಿತ ವಾಹನ ನೀತಿ 2026-2030'ರ ಕರಡು ಪ್ರತಿಯನ್ನು ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೈಬ್ರಿಡ್ ಇ.ವಿಗಳಿಗೆ ಶೇಕಡ 50ರಷ್ಟು ವಿನಾಯಿತಿ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.
ದೆಹಲಿಯಲ್ಲಿ ನೋಂದಾಯಿಸಿದ ₹30 ಲಕ್ಷಕ್ಕಿಂತ ಹೆಚ್ಚಿನ ಎಕ್ಸ್-ಶೋರೂಂ ಬೆಲೆಯ ವಿದ್ಯುತ್‌ಚಾಲಿತ ಕಾರುಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ಯಾವುದೇ ವಿನಾಯಿತಿ ನೀಡಲಾಗುವು ದಿಲ್ಲ. 2027ರ ಜನವರಿ 1ರಿಂದ ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳ ಹೊಸ ನೋಂದಣಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಕರಡಿನಲ್ಲಿ ಹೇಳಲಾಗಿದೆ. ಈ ಕರಡು ನೀತಿ ಕುರಿತು ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಆಕ್ಷೇಪಣೆಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

