ನವದೆಹಲಿ: ತಂತ್ರಜ್ಞಾನವು ಇನ್ನುಮುಂದೆ ಆಡಳಿತಾತ್ಮಕ ಅನುಕೂಲಕ್ಕೆ ಬಳಕೆಯಾಗುವ ಸಾಧನವಷ್ಟೇ ಅಲ್ಲ. ಅದೀಗ ಸಮಾನತೆ, ನ್ಯಾಯದಾನವನ್ನು ಬಲಪಡಿಸುವ ಹಾಗೂ ನ್ಯಾಯಾಂಗದ ಪ್ರಕ್ರಿಯೆಗಳಲ್ಲಿನ ತೊಡಕು ನಿವಾರಣೆಗೆ ಸಹಕಾರಿಯಾಗುವ ಸಾಂವಿಧಾನಿಕ ಸಾಧನ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಹೇಳಿದ್ದಾರೆ.
'ನ್ಯಾಯಾಂಗ ಪ್ರಕ್ರಿಯೆಯ ಪುನರುತ್ಥಾನ ಮತ್ತು ಡಿಜಿಟಲ್ ರೂಪಾಂತರ' ಎಂಬ ವಿಷಯ ಆಧರಿಸಿ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯೂ ನ್ಯಾಯಯುತ, ಸಕಾಲಿಕ ಮತ್ತು ಪರಿಣಾಮಕಾರಿ ನ್ಯಾಯದಾನ ಪಡೆಯಲು ಸಾಧ್ಯವಾಗುತ್ತದೆ ಎನ್ನುವ ಭವರವಸೆಯನ್ನು ಖಾತರಿಪಡಿಸಿಕೊಳ್ಳುವುದೇ ಎಲ್ಲಾ ನ್ಯಾಯ ವ್ಯವಸ್ಥೆಯ ಮೂಲತತ್ವ' ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ತರುವ ಯಾವುದೇ ಸುಧಾರಣೆಯನ್ನು ದೇಶದ ನಾಗರಿಕರು, ವಕೀಲರು ಹಾಗೂ ನ್ಯಾಯಾಂಗದ ಇತರೆ ಪಾಲುದಾರರು ಎಷ್ಟು ಅರ್ಥಪೂರ್ವಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಅದರಿಂದ ಲಾಭ ಪಡೆಯುತ್ತಿದ್ದಾರೆ ಎಂಬುದರ ಮೇರೆಗೆ ಆ ಸುಧಾರಣೆಯ ಮೌಲ್ಯವನ್ನು ಅಳೆಯಲಾಗುತ್ತದೆ ಎಂದೂ ಸಿಜೆಐ ಹೇಳಿದ್ದಾರೆ.
'ಪ್ರತಿಯೊಂದು ನ್ಯಾಯಾಲಯವೂ ಹೈಬ್ರಿಡ್ ವಿಚಾರಣಾ ಸೌಲಭ್ಯಗಳನ್ನು ಹೊಂದಬೇಕು. ಸಂಪೂರ್ಣ ಕಾಗದರಹಿತವಾಗಿ ಕಾರ್ಯನಿರ್ವಹಿಸುವ ಸಂಯೋಜಿತ ಡಿಜಿಟಲ್ ವ್ಯವಸ್ಥೆ ಹೊಂದುವುದನ್ನು ಕೂಡ ಖಾತರಿಪಡಿಸಿಕೊಳ್ಳಬೇಕು. ತಂತ್ರಜ್ಞಾನ ಆಡಳಿತಾತ್ಮಕ ಅನುಕೂಲಕ್ಕಷ್ಟೇ ಅಲ್ಲ, ಅದು ನ್ಯಾಯದಾನದ ತೊಡಕುಗಳ ನಿವಾರಣೆಯ ಸಾಧನ' ಎಂದೂ ಸಿಜೆಐ ಪ್ರತಿಪಾದಿಸಿದರು.
'ವಾಣಿಜ್ಯ ಕಾನೂನು ರಚನೆಯ ಪರಿಷ್ಕರಣೆ ಆಗಲಿ'
'ದೇಶವನ್ನು 10 ಟ್ರಿಲಿಯನ್ ಡಾಲರ್ (930 ಲಕ್ಷ ಕೋಟಿ) ಆರ್ಥಿಕತೆಯನ್ನಾಗಿ ಪರಿವರ್ತಿಸಲು ಕೇವಲ ಬಂಡವಾಳ, ನೀತಿ ನಿರೂಪಣೆಗಳಿಂದ ಸಾಧ್ಯವಿಲ್ಲ. ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟವೂ ಇದರಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ವಾಣಿಜ್ಯ ಕಾನೂನು ರಚನೆಯನ್ನೂ ಪರಿಷ್ಕರಿಸಬೇಕು' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಕರೆ ನೀಡಿದ್ದಾರೆ.
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 'ರೂಲ್ ಆಫ್ ಲಾ ಕನ್ವೆನ್ಷನ್ 2026' ಕಾರ್ಯಕ್ರಮದಲ್ಲಿ 'ಲೀಗಲ್ ರಿಫಾರ್ಮ್ ರೋಡ್‌ಮ್ಯಾಪ್ ಟು 10 ಟ್ರಿಲಿಯನ್ ಡಾಲರ್ ಭಾರತ್' ಎಂಬ ವಿಚಾರದ ಕುರಿತು ಸಿಜೆಐ ಮಾತನಾಡಿದರು.
'ದೇಶವು ಭವಿಷ್ಯದ ಗುರಿ ಸಾಧಿಸಬೇಕಾದರೆ ಹೂಡಿಕೆ ಅಗತ್ಯ, ಈ ನಿಟ್ಟಿನಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸುವಂತಹ ವಾಣಿಜ್ಯ ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಬದಲಾಗುತ್ತಿರುವ ಆರ್ಥಿಕತೆಯ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ ಮತ್ತು ಕಾನೂನು ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು' ಎಂದೂ ಕರೆ ನೀಡಿದ್ದಾರೆ.
ಸಂಧಾನ-ಮಧ್ಯಸ್ಥಿಕೆ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಘಟಕ: ಬಿ.ವಿ. ನಾಗರತ್ನ
ನವದೆಹಲಿ (PTI): 'ಸಂಧಾನ ಮತ್ತು ಮಧ್ಯಸ್ಥಿಕೆ ಎಂಬುದು ವಿವಾದಗಳನ್ನು ಬಗೆಹರಿಸಲು ಇರುವ ಪರ್ಯಾಯ ಮಾರ್ಗಗಳಷ್ಟೇ ಅಲ್ಲ. ಅವು ಆಧುನಿಕ ಮತ್ತು ಸ್ಪಂದನಾತ್ಮಕ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಘಟಕಗಳು' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಶನಿವಾರ ಹೇಳಿದ್ದಾರೆ.
ಾರತೀಯ ಮಧ್ಯಸ್ಥಿಕೆ ಪರಿಷತ್ ಆಯೋಜಿಸಿದ್ದ 'ಆರ್ಬಿಟೇಷನ್ ಇನ್ ದಿ ಎರಾ ಆಫ್ ಗ್ಲೋಬಲೈಸೇಷನ್' (ಜಾಗತೀಕರಣದ ಕಾಲಘಟ್ಟದಲ್ಲಿ ಮಧ್ಯಸ್ಥಿಕೆ ) ಎಂಬ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನ್ಯಾ. ಬಿ.ವಿ. ನಾಗರತ್ನ ಮಾತನಾಡಿ ಅರ್ಥ ವ್ಯವಸ್ಥೆಯು ಹೆಚ್ಚು ಸಂಕೀರ್ಣ ಮತ್ತು ಜಾಗತೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನಗಳ ಮಹತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ.
'ವಿವಾದಗಳು ಕಾನೂನಾತ್ಮಕ ಪ್ರಶ್ನೆಗಳಷ್ಟೇ ಅಲ್ಲ; ಸಾಮಾಜಿಕ ವಾಣಿಜ್ಯ ಪರಸ್ಬರ ಸಂಬಂಧಗಳ ಕುರಿತಾದ ಪ್ರಶ್ನೆಗಳೂ ಹೌದು. ಇವುಗಳಿಗೆ ನ್ಯಾಯಾಲಯದ ತೀರ್ಪಿಗಿಂತಲೂ ಹೆಚ್ಚಾಗಿ ಸ್ವಯಂ ಪ್ರೇರಿತ ಪರಿಹಾರಗಳು ಬೇಕಾಗಬಹುದು. ಹೀಗಾಗಿ ಸಂಧಾನ ಅಥವಾ ಮಧ್ಯಸ್ಥಿಕೆ ಎಂಬುದನ್ನು ಕೇವಲ ಪರ್ಯಾಯ ಮಾರ್ಗ ಎಂದು ನೋಡಲಾಗದು' ಎಂದೂ ಅವರು ಹೇಳಿದ್ದಾರೆ.

