ಕೋಲ್ಕತ್ತಾ: ಲೋಕಸಭೆಯಲ್ಲಿ ಮಾಜಿ ವಿಪಕ್ಷ ನಾಯಕ, ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸುಮಾರು 35 ವರ್ಷಗಳ ಬಳಿಕ ವಿಧಾನಸಭಾ ಚುನಾವಣಾ ಸ್ಪರ್ಧೆಗೆ ಧುಮುಕಿದ್ದಾರೆ.
1991ರಲ್ಲಿ ಅಧೀರ್ ರಂಜನ್ ಚೌಧರಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಪರಾಭವಗೊಂಡಿದ್ದ ವೇಳೆ ದಿ. ಪಿ.ವಿ.ನರಸಿಂಹರಾವ್ ದೇಶದ ಪ್ರಧಾನಿಯಾಗಿದ್ದರು ಹಾಗೂ ದಿ. ಜ್ಯೋತಿ ಬಸು ಪಶ್ಚಿ ಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು.
ಇದಾದ ಮೂರೂವರೆ ದಶಕಗಳ ಬಳಿಕ, ಸತತ ಐದು ಬಾರಿ ಸಂಸದರಾದ ನಂತರ ಅವರು ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇದಾದ ಬಳಿಕ, ಅವರೀಗ ಬಹರಂಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕೆ ಮರಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, "ನಾನು ನನ್ನ ನಗರದಿಂದ ಸ್ವಲ್ಪ ದೂರವಿದ್ದ ನಬಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದೆ. ಆ ಕ್ಷೇತ್ರದ ಮೇಲೆ ಎಡರಂಗದ ಎಂಥ ಹಿಡಿತವಿತ್ತೆಂದರೆ, ಆ ಕ್ಷೇತ್ರವನ್ನು ಹೆಮ್ಮೆಯಿಂದ 'ಮುರ್ಷಿದಾಬಾದ್ ನ ವಿಯೆಟ್ನಾಂ' ಎಂದು ಕರೆಯುತ್ತಿದ್ದರು. ಭಾರಿ ಮತಗಳವಿನ ಹೊರತಾಗಿಯೂ ನಾನು ಕೇವಲ 1,300 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೆ" ಎಂದು ಸ್ಮರಿಸುತ್ತಾರೆ. ಇದಾದ ಐದು ವರ್ಷಗಳ ಬಳಿಕ ಬಹರಂಪುರ್ ಮತದಾರರ ಆಶೀರ್ವಾದದಿಂದ ನಾನು ಗೆಲುವು ಸಾಧಿಸಿದೆ" ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.
"ನಾನು 2024ರ ಲೋಕಸಭಾ ಚುನಾವಣೆಯಲ್ಲಿ ಬಹರಂಪುರ್ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದೆ. ಪಕ್ಷದ ನಾಯಕತ್ವವು ಪಶ್ಚಿ ಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಸೂಚಿಸಿತು. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನದನ್ನು ಒಪ್ಪಿಕೊಂಡೆ. ನಾನೀಗ ಶೂನ್ಯದಿಂದ ಪ್ರಾರಂಭಿಸುತ್ತಿದ್ದೇನೆ" ಎಂದು "ನೀವೇಕೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರಿ?" ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಅಧೀರ್ ರಂಜನ್ ಚೌಧರಿಯವರ ಸ್ಪರ್ಧೆಯ ಬಗ್ಗೆ ವದಂತಿಗಳು ಗರಿಗೆದರಿದ್ದರೂ, ಅವರ ಬೆಂಬಲಿಗರೂ ಉತ್ತಮವಾಗಿ ಸನ್ನದ್ಧರಾಗಿರುವಂತೆ ಕಂಡು ಬರುತ್ತಿದೆ. ಈಗಾಗಲೇ ಅವರ ಕಚೇರಿಯಲ್ಲಿ ಕಟೌಟ್ ಗಳು, ಬ್ಯಾನರ್ ಗಳು, ತೋರಣ ಹಾಗೂ ಭಿತ್ತಿಚಿತ್ರಗಳನ್ನು ಪೇರಿಸಲಾಗಿದೆ.
ಅಧೀರ್ ರಂಜನ್ ಚೌಧರಿಯವರ ಸ್ಪರ್ಧೆಯನ್ನು ಕಾಂಗ್ರೆಸ್ ರವಿವಾರ ಅಧಿಕೃತವಾಗಿ ಪ್ರಕಟಿಸಿರುವುದರಿಂದ, ಗೋರಾ ಬಝಾರ್ ಪ್ರದೇಶದಲ್ಲಿರುವ ಅವರ ನಿವಾಸ ಹಾಗೂ ಪದೇ ಪದೇ 'ಅಧೀರ್ ದಾ ಕಚೇರಿ' ಎಂದು ಕರೆಯಲಾಗುವ ಪಕ್ಷದ ಕಚೇರಿಯಲ್ಲಿ ಚಟುವಟಿಕೆಗಳು ಶುರುವಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, "ಇದು ನಮಗೆ ಮಾಡು ಇಲ್ಲವೆ ಮಡಿ ಹೋರಾಟ" ಎಂದು ಹೇಳಿದರು.
ಅಧೀರ್ ರಂಜನ್ ಚೌಧರಿ ಅವರು ತಮ್ಮ ಮಾಜಿ ಸಹೋದ್ಯೋಗಿ, ಬಹರಂಪುರ್ ನಗರ ಪಾಲಿಕೆಯ ಅಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಾರುಗೋಪಾಲ್ ಮುಖರ್ಜಿ ಹಾಗೂ ಹಾಲಿ ಬಿಜೆಪಿ ಶಾಸಕ ಸುಬ್ರತಾ ಮೈತ್ರರನ್ನು ಈ ಕ್ಷೇತ್ರದಲ್ಲಿ ಎದುರಿಸುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಸಿಪಿಎಂ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿದ್ದರೂ, ಇದುವರೆಗೆ ಅವರ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

