ನವದೆಹಲಿ: 2025-26ರ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪನ್ನಗಳ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟ ₹38,424 ಕೋಟಿಗೆ ತಲುಪಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 62ರಷ್ಟು ಹೆಚ್ಚಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ರಕ್ಷಣಾ ರಫ್ತಿನಲ್ಲಿನ ದೊಡ್ಡ ಜಿಗಿತವು ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ದೇಶವು ಪ್ರಭಾವಶಾಲಿ ರಕ್ಷಣಾ ರಫ್ತು ಯಶಸ್ಸಿನ ಕಥೆಯನ್ನು ಬರೆಯುತ್ತಿದೆ ಎಂದು ಹೇಳಿದ್ದಾರೆ.
'2025-26ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ದಾಖಲೆಯ ₹38,424 ಕೋಟಿ ಮುಟ್ಟುವ ಮೂಲಕ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 62.66 ರಷ್ಟು ಬಲವಾದ ಬೆಳವಣಿಗೆಯನ್ನು ಸೂಚಿಸುತ್ತದೆ' ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ರಕ್ಷಣಾ ರಫ್ತಿನಲ್ಲಿ ₹14,802 ಕೋಟಿಗಳ ಈ ದೊಡ್ಡ ಜಿಗಿತವು ಭಾರತದ ಸ್ಥಳೀಯ ಸಾಮರ್ಥ್ಯಗಳು ಮತ್ತು ಭಾರತದ ರಕ್ಷಣಾ ಉತ್ಪನ್ನಗಳ ಮೇಲೆ ಜಾಗತಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಪೈಕಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ಪಾದಿಸಿದ ಶೇ 54.84ರಷ್ಟು ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ಉತ್ಪಾದನೆಗೊಂಡ ಶೇ 45.16ರಷ್ಟು ಉತ್ಪನ್ನ ಸೇರಿವೆ. ಈ ಮೈಲಿಗಲ್ಲು ಸಹಕಾರಿ ಮತ್ತು ಸ್ವಾವಲಂಬಿ ರಕ್ಷಣಾ ಪರಿಸರ ವ್ಯವಸ್ಥೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದ್ದಾರೆ.
2024-25ರಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಮೌಲ್ಯ ₹23,622 ಕೋಟಿ ಗಳಷ್ಟಿತ್ತು. 2023-24ರಲ್ಲಿ ಇದು ₹21,083 ಕೋಟಿ ಗಳಷ್ಟಾಗಿತ್ತು.

