ಜೈಪುರ: ದೇಶದ ವಿವಿಧೆಡೆ ಸೂರ್ಯ ಕೆಂಡದಂತೆ ಸುಡುತ್ತಿದ್ದಾನೆ. ಉತ್ತರ ಮತ್ತು ಪಶ್ಚಿಮ ಭಾರತದ ಹಲವೆಡೆ ತಾಪಮಾನ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ ಬಿಸಿ ಗಾಳಿ ತೀವ್ರಗೊಂಡಿದ್ದು, 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ರಾಜಸ್ಥಾನದ ಬಹುತೇಕ ಕಡೆ ಭಾನುವಾರ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬರ್ಮರ್ ಜಿಲ್ಲೆಯ ಜೈಸಲ್ಮೇರ್‌ನಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ, ಕೋಟ ಮತ್ತು ಚಿತ್ತೋರ್‌ಗಢದಲ್ಲಿ 45.2 ಡಿಗ್ರಿ ಸೆಲ್ಸಿಯಸ್ ಇತ್ತು. ಫಲೋಡಿಯಲ್ಲಿ 44.8 ಡಿಗ್ರಿ ಸೆಲ್ಸಿಯಸ್, ಬಿಕನೇರ್‌ನಲ್ಲಿ 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇತ್ತ, ಜೋಧಪುರ ಮತ್ತು ಪಿಲಾನಿಯಲ್ಲಿ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಚುರುವಿನಲ್ಲಿ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗಂಗಾನಗರದಲ್ಲಿ 43.7 ಡಿಗ್ರಿ ಸೆಲ್ಸಿಯಸ್, ಜೈಪುರದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ಬಿಸಿಲಿನ ತಾಪ ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಇದೇ 28 ರಿಂದ 30 ರವರೆಗೆ ರಾಜ್ಯದ ಪಶ್ಚಿಮ ಮತ್ತು ಉತ್ತರ ಪ್ರದೇಶಗಳ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗಲಿದೆ ಎಂದು ತಿಳಿಸಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ಗರಿಷ್ಠ ತಾಪಮಾನ 42.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುಮಾನದ ಸರಾಸರಿಗಿಂತ 3.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನಗರದ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನವು 26.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ನಗರದಾದ್ಯಂತ ಗರಿಷ್ಠ ತಾಪಮಾನ 42 ರಿಂದ 44 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

