ನವದೆಹಲಿ: ಗಡುವು ಮೀರಿದ್ದಲ್ಲಿ ಇಂದು ರಾತ್ರಿಯೇ ಇರಾನ್ ಸರ್ವನಾಶವಾಗಲಿದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಮುಂದಿನ 48 ತಾಸು ಇದ್ದಲ್ಲೇ ಇರುವಂತೆ ತುರ್ತು ಸೂಚನೆ ನೀಡಲಾಗಿದೆ.
ಪಶ್ಚಿಮ ಏಷ್ಯಾ ಯುದ್ಧ ನಿರ್ಣಾಯಕ ಹಂತವನ್ನು ತಲುಪಿರುವಂತೆಯೇ ಮುಂದಿನ 48 ಗಂಟೆಗಳ ಕಾಲ ಎಲ್ಲಿ ಇರುತ್ತಾರೆಯೋ ಅಲ್ಲೇ ಇರುವಂತೆ ಭಾರತೀಯ ನಾಗರಿಕರಿಗೆ ತುರ್ತು ನಿರ್ದೇಶನ ನೀಡಲಾಗಿದೆ.
ಮಿಲಟರಿ ಮೂಲಸೌಕರ್ಯ, ಬಹುಮಹಡಿ ಕಟ್ಟಡ ಮುಂತಾದ ಪ್ರದೇಶಗಳಲ್ಲಿ ನಿಲ್ಲದಂತೆ ಸೂಚನೆ ನೀಡಲಾಗಿದ್ದು, ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ.
ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆಯೂ ಸೂಚಿಸಲಾಗಿದೆ. ಅಲ್ಲದೆ ಸಹಾಯವಾಣಿ ಸಂಖ್ಯೆಯು ಚಾಲ್ತಿಯಲ್ಲಿದೆ ಎಂದು ತಿಳಿಸಿದೆ.
ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವಂತೆ ಇರಾನ್‌ಗೆ ಟ್ರಂಪ್ ಗಡುವು (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5.30ಕ್ಕೆ) ಗಡುವು ವಿಧಿಸಿದ್ದರು. ಈ ಗುಡುವು ಮೀರಿದರೆ ಇರಾನ್‌ನ ಸಂಪೂರ್ಣ ನಾಗರಿಕತೆ ಸರ್ವನಾಶವಾಗಲಿದೆ ಎಂದು ಟ್ರಂಪ್ ಬೆದರಿಕೆ ಒಡ್ಡಿದ್ದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಫೆಬ್ರುವರಿ 28ರಂದು ನಡೆದ ದಾಳಿಯ ವೇಳೆ ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 9,000 ಭಾರತೀಯರಿದ್ದಾರೆ. ಈ ಪೈಕಿ 1,800 ಮಂದಿ ಸ್ವದೇಶಕ್ಕೆ ಮರಳಿದ್ದಾರೆ.

