ಶಿವಸಾಗರ: 'ಕಾಂಗ್ರೆಸ್ ನಾಯಕ ಪವನ್ ಖೇರಾ ಪೊಲೀಸರಿಗೆ ಹೆದರಿ ಹೈದರಾಬಾದ್‌ಗೆ ಪಲಾಯನಗೈದಿದ್ದಾರೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಕುಟುಂಬದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಪವನ್ ಖೇರಾ ನಿವಾಸದ ಮೇಲೆ ಅಸ್ಸಾಂ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
'ಪವನ್ ಖೇರಾ ತನ್ನನ್ನು ಬಂಧಿಸುವಂತೆ ಅಸ್ಸಾಂ ಪೊಲೀಸರಿಗೆ ಸವಾಲು ಹಾಕಿದ್ದರು. ಆದರೆ ಈಗ ಹೈದರಾಬಾದ್‌ಗೆ ಓಡಿ ಹೋಗಿದ್ದಾರೆ' ಎಂದು ಶಿವಸಾಗರದಲ್ಲಿ ಚುನಾವಣಾ ಸಮಾವೇಶದ ವೇಳೆ ಹಿಮಂತ ಹೇಳಿದ್ದಾರೆ.
'ಅವರು ಏಕೆ ಪಲಾಯನ ಮಾಡಿದ್ದರೆಂದು ನನಗೆ ಗೊತ್ತಿಲ್ಲ. ನಿನ್ನೆಯವರೆಗೂ ಖೇರಾ ನನ್ನನ್ನು ಬಂಧಿಸಿ ಎಂದು ಸವಾಲು ಹಾಕುತ್ತಿದ್ದರು. ಈಗ ವಿಚಾರಣೆಗಾಗಿ ಪೊಲೀಸರು ಅವರ ನಿವಾಸಕ್ಕೆ ತೆರಳಿದಾಗ ಓಡಿ ಹೋಗಿದ್ದಾರೆ' ಎಂದು ಹೇಳಿದ್ದಾರೆ.
'ನನ್ನ ವಿರುದ್ಧ ಪವನ್ ಖೇರಾ ಸುಳ್ಳು ಆರೋಪ ಮಾಡಿದ್ದಾರೆ' ಎಂದು ಹಿಮಂತ ತಿಳಿಸಿದ್ದಾರೆ.
ಹಿಮಂತ ಅವರ ಪತ್ನಿ ಮೂರು ವಿದೇಶಿ ಪಾಸ್‌ಪೋರ್ಟ್‌ಗಳನ್ನು, ದುಬೈನಲ್ಲಿ ಆಸ್ತಿಗಳನ್ನು, ಅಮೆರಿಕದಲ್ಲಿ ಕಂಪನಿಗಳನ್ನು ಅಥವಾ ಶೆಲ್ ಕಂಪನಿಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು.
ಆದರೆ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳಿಂದ ಪಡೆದ ಸುಳ್ಳು ಮಾಹಿತಿಯನ್ನು ಪಡೆದು ಆರೋಪ ಮಾಡಲಾಗುತ್ತಿದೆ. ಇದು ಅಸ್ಸಾಂ ಚುನಾವಣೆಯ ಮೇಲೆ ಪರಿಣಾಮ ಬೀರುವ ಮತ್ತು ಶಿಕ್ಷಾರ್ಹ ಅಪರಾಧ ಎಂದು ಹಿಮಂತ ತಿರುಗೇಟು ನೀಡಿದ್ದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

