ನವದೆಹಲಿ: ಕೇಂದ್ರ ಸರಕಾರವು ಲೋಕಸಭೆಯ ಸದಸ್ಯ ಬಲವನ್ನು 543ರಿಂದ 850ಕ್ಕೆ ಹೆಚ್ಚಿಸಲು ಕ್ಷೇತ್ರ ಪುನರ್ವಿಂಗಡಣೆಗಾಗಿ ಮಸೂದೆಗಳನ್ನು ಗುರುವಾರ ಮಂಡಿಸಲಿದೆ.
ಈ ಪೈಕಿ ರಾಜ್ಯಗಳು 815 ಮತ್ತು ಕೇಂದ್ರಾಡಳಿತ ಪ್ರದೇಶಗಳು 35 ಸ್ಥಾನಗಳನ್ನು ಹೊಂದಿರಲಿವೆ.
ಕಳೆದ ಎರಡು ವಾರಗಳಿಂದ ರಾಜಕೀಯ ವಲಯಗಳಲ್ಲಿ ಕಾನೂನಿಗೆ ತಿದ್ದುಪಡಿ ಕುರಿತು ಊಹಾಪೋಹಗಳು ಹರಡುತ್ತಿದ್ದವು.
ಮಂಗಳವಾರ ಮೊದಲ ಬಾರಿಗೆ ಕರಡು ಶಾಸನದ ಪ್ರತಿಗಳನ್ನು ಸಂಸದರೊಂದಿಗೆ ಹಂಚಿಕೊಳ್ಳಲಾಗಿದೆ.
ಪುನರ್ವಿಂಗಡಣೆಯು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಪ್ರಕ್ರಿಯಾಗಿದೆ. ಸಂವಿಧಾನದ ವಿಧಿ 82ರ ಪ್ರಕಾರ ಪ್ರತಿ ಸಲ ಜನಗಣತಿ ಪೂರ್ಣಗೊಂಡ ಬಳಿಕ ಪ್ರತಿ ರಾಜ್ಯದ ಜನಸಂಖ್ಯೆಯಲ್ಲಿನ ಬದಲಾವಣೆಗಳನ್ನು ಆಧರಿಸಿ ಅದರ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಪರಿಷ್ಕರಿಸುವುದು ಅಗತ್ಯವಾಗಿದೆ.
ಲೋಕಸಭೆಯಲ್ಲಿ ಪ್ರಸ್ತುತ ಸದಸ್ಯರ ಸಂಖ್ಯೆಯು 1971ರ ಜನಗಣತಿಯನ್ನು ಆಧರಿಸಿದೆ. 2001ರ 84ನೇ ತಿದ್ದುಪಡಿ ಕಾಯ್ದೆಯಂತೆ ಕ್ಷೇತ್ರ ಗಡಿಗಳನ್ನು 2026ರ ನಂತರದ ಮೊದಲ ಜನಗಣತಿಯವರೆಗೆ ಸ್ಥಗಿತಗೊಳಿಸಲಾಗಿತ್ತು. ಸಂಸತ್ತಿನಲ್ಲಿ ಮಂಡನೆಯಾಗಲಿರುವ ಮಸೂದೆಯು ಸಂವಿಧಾನದ 82ನೇ ವಿಧಿಯನ್ನು ತಿದ್ದುಪಡಿ ಮಾಡಿ ಈ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲು ಉದ್ದೇಶಿಸಿದೆ. ಇದರಿಂದಾಗಿ ಮುಂದಿನ ಕ್ಷೇತ್ರ ಪುನರ್ವಿಂಗಡಣೆಯನ್ನು 2011ರ ಜನಗಣತಿಯ ಅಂಕಿಅಂಶಗಳ ಆಧಾರದಲ್ಲಿ ನಡೆಸಲು ಹಾದಿಯು ಸುಗಮಗೊಳ್ಳಲಿದೆ.
ಎ.1ರಿಂದ ಆರಂಭಗೊಂಡಿರುವ ಜನಗಣತಿಯು 2027ರಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಎ.16ರಿಂದ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದಿರುವ ಕೇಂದ್ರವು ಸಂಸತ್ತು 2023ರ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿಗಳನ್ನು ಪರಿಗಣಿಸಲಿದೆ ಎಂದು ಹೇಳಿತ್ತು. ಕ್ಷೇತ್ರ ಪುನರ್ವಿಂಗಡಣೆಯ ಕುರಿತೂ ಅದು ಸುಳಿವು ನೀಡಿತ್ತು.
2023ರ ಕಾಯ್ದೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗಾಗಿ ಶೇ.33ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಆದಾಗ್ಯೂ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ಬಳಿಕವೇ ಈ ಮೀಸಲಾತಿಗಳು ಪರಿಣಾಮಕಾರಿಯಾಗಲಿವೆ.

