ವಾಶಿಂಗ್ಟನ್ : ನೀತಿ ನಿರ್ಬಂಧಗಳು ಮತ್ತು ಕಟ್ಟುನಿಟ್ಟಾದ ಪರಿಶೀಲನೆ ಪ್ರಕ್ರಿಯೆಯ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 61%ಕ್ಕೆ ಏರಿಕೆಯಾಗಿದ್ದು ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಧಿಕ ಮಟ್ಟವಾಗಿದೆ.
ಅಮೆರಿಕದಲ್ಲಿ ವಿದೇಶಿ ದಾಖಲಾತಿಗಳಲ್ಲಿ ಭಾರತೀಯರ ಪ್ರಾತಿನಿಧ್ಯ 30% ಇದೆ.
ಆದರೆ ಭಾರತೀಯ ವಿದ್ಯಾರ್ಥಿಗಳ ನಿರಾಕರಣೆ ಪ್ರಮಾಣವು 2024ರಲ್ಲಿ 53% ಇದ್ದರೆ, 2025ರಲ್ಲಿ 61%ಕ್ಕೆ ಏರಿಕೆಯಾಗಿದೆ ಎಂದು `ಶೋರ್‍ಲೈಟ್ಸ್' ವರದಿ ಹೇಳಿದೆ.
ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ಮಟ್ಟದಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ನೇಪಾಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 2024ರಲ್ಲಿ 59% ಇದ್ದರೆ 2025ರಲ್ಲಿ 81%ಕ್ಕೆ ಹೆಚ್ಚಿದೆ. ಆದರೆ ಇದೇ ಅವಧಿಯಲ್ಲಿ ಯುರೋಪಿಯನ್ ವಿದ್ಯಾರ್ಥಿಗಳ ವೀಸಾ ನಿರಾಕರಣೆ 9% ಆಗಿತ್ತು. ವೀಸಾ ನಿರಾಕರಣೆ ಹೆಚ್ಚಾಗಿರುವುದು ಮಾತ್ರವಲ್ಲದೆ ಅವು ನಿರ್ದಿಷ್ಟ ಪ್ರದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಾದ್ಯಂತ ರಚನಾತ್ಮಕವಾಗಿ ಕೇಂದ್ರೀಕೃತವಾಗಿದೆ.
ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ 60%ಕ್ಕೆ ಹೆಚ್ಚಿರುವುದರಿಂದ ನಾವು ವಿದ್ಯಾರ್ಥಿಗಳನ್ನು ನಿರಾಕರಿಸುತ್ತಿಲ್ಲ. ಅಮೆರಿಕದ ವಿಶ್ವವಿದ್ಯಾಲಯಗಳು, ಉದ್ಯೋಗದಾತರು ಮತ್ತು ಆರ್ಥಿಕತೆಗೆ ನಿರ್ಣಾಯಕ ಪ್ರತಿಭೆಯ ಪೈಪ್‍ಲೈನ್ ಅನ್ನು ಕಡಿತಗೊಳಿಸುತ್ತಿದ್ದೇವೆ' ಎಂದು ವರದಿ ಹೇಳಿದೆ.
ವೀಸಾ ನಿರ್ಬಂಧ ವಿಸ್ತರಿಸಿದ ಅಮೆರಿಕ
ವಿರೋಧಿ ದೇಶಗಳಿಗೆ ಸಹಾಯ ಮಾಡುವ ಆರೋಪ ಎದುರಿಸುವ ವ್ಯಕ್ತಿಗಳನ್ನು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರನ್ನೂ ಗುರಿಯಾಗಿಸಿ ವೀಸಾ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
ಈ ಕ್ರಮವು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಮತ್ತು ವಿದೇಶಿ ಪ್ರಭಾವವನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಜನರಿಗೆ ಈ ನೀತಿಯು ಅನ್ವಯಿಸುತ್ತದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧದ ಚಟುವಟಿಕೆಗಳನ್ನು ನಿರ್ದೇಶಿಸುವ, ಬೆಂಬಲಿಸುವ ಅಥವಾ ಆರ್ಥಿಕ ನೆರವು ಒದಗಿಸುವವರನ್ನು ಒಳಗೊಳ್ಳುತ್ತದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.

