ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಸೇರಿದಂತೆ ಕೇರಳದ 140 ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಶಾಂತಿಯುತವಾಗಿ ಕೊನೆಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶೇ. 79.11 ಮತದಾನ ದಾಖಲಾಗಿದೆ.
ಮಂಜೇಶ್ವರ ಶೇ. 81.04, ಕಾಸರಗೋಡು ಶೇ. 79.61, ಉದುಮ ಶೇ. 78.07, ಕಾಞಂಗಾಡು ಶೇ. 77.24 ಹಾಗೂ ತ್ರಿಕ್ಕರಿಪುರ ಶೇ.79.64 ಮತದಾನ ದಾಖಲಾಗಿದೆ. ಬೆಳಗ್ಗೆ 7ಕ್ಕೆ ಮತದಾನ ಆರಂಭಗೊಂಡಿದ್ದು, ಇದಕ್ಕೂ ಮೊದಲು ಅಣಕು ಮತದಾನ ನಡೆಸುವ ಮೂಲಕ ಮತಯಂತ್ರಗಳ ಬಗ್ಗೆ ಖಚಿತತೆ ವ್ಯಕ್ತಪಡಿಸಿಕೊಳ್ಳಲಾಯಿತು.
ಕೆಲವೊಂದು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಸಣ್ಣಪುಟ್ಟ ತಕರಾರುಗಳು ಕಂಡುಬಂದಿದ್ದರೂ, ಮತದಾನಕ್ಕೆ ಯಾವುದೇ ಅಡ್ಡಿ ಉಂಟಾಗಿರಲಿಲ್ಲ. ಮಂಜೇಶ್ವರ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಸಿಬ್ಬಂದಿಯ ವಿಳಂಬ ಧೋರಣೆಯಿಂದ ಮತದಾನ ನಿಧಾನಗತಿಯಿಂದ ಸಾಗುವಂತಾಗಿತ್ತು. ಪೆರ್ಲದ 215ನೇ ಮತಗಟ್ಟೆಯಲ್ಲಿ ಮತದಾನದ ಕಾಲಾವಧಿ ಕಳೆದ ನಂತರವೂ ಸರತಿಸಾಲಲ್ಲಿದ್ದ ನೂರಕ್ಕೂ ಹೆಚ್ಚು ಮಂದಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೆಲವೆಡೆ ಮತಯಂತ್ರಗಳಲ್ಲಿ ಸಣ್ಣಪುಟ್ಟ ತಕರಾರು ಕಂಡುಬಂದಿದ್ದರೆ, ನಕಲಿ ಮತದಾನಕ್ಕೆ ಶ್ರಮವೂ ನಡೆದಿದ್ದು, ಪೊಲೀಸ್ ಕಾರ್ಯಾಚರಣೆಯಿಂದ ವಿಫಲವಾಗಿದೆ. ಬಿಸಿಲಿನ ತಾಪದ ನಡುವೆಯೂ ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿತ್ತು. ಫಲಿತಾಂಶಕ್ಕಾಗಿ ಇನ್ನೂ 24ದಿವಸಗಳ ಕಾಲ ಮತದಾರರು ಕಾಯಬೇಕಾಗಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನಂತರ ನಡೆದ ಪ್ರಥಮ ಚುನಾವಣೆ ಇದಾಗಿದ್ದು, ಸ್ವಾಭಾವಿಕವಾಗಿ ಮತದಾನದ ಶೇಕಡಾವರು ಹೆಚ್ಚಳಗೊಂಡಿದೆ.



