ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮುನ್ನ ಮತದಾರರ ಪಟ್ಟಿಗೆ ಸುಮಾರು 7 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಆದರೆ, ಈ ಸಂಬಂಧದ ವಿವರವಾದ ಮಾಹಿತಿ ಇನ್ನೂ ಬಿಡುಗಡೆ ಆಗಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಸುಮಾರು 3.22 ಲಕ್ಷ ಮಂದಿ ಮೊದಲ ಹಂತದ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ 3.88 ಲಕ್ಷ ಮಂದಿ ಎರಡನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಹೊಸ ಸೇರ್ಪಡೆಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ವರ್ಷ ತುಂಬಿದ ಯುವಕರ ಸಂಖ್ಯೆ ಎಷ್ಟು ಎಂಬುದನ್ನು ಆಯೋಗ ಸ್ಪಷ್ಟಪಡಿಸಿಲ್ಲ. ಲಿಂಗವಾರು ವಿವರಗಳನ್ನೂ ನೀಡಿಲ್ಲ.
ಮತದಾರರ ಪಟ್ಟಿಗೆ ಸೇರಲು ಸಲ್ಲಿಸಿದ ಫಾರ್ಮ್-6 ಅರ್ಜಿಗಳ ವಿವರಗಳು ಹಾಗೂ ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನೂ ಬಹಿರಂಗಪಡಿಸಲಾಗಿಲ್ಲ. ಇದುವರೆಗೆ ಒಟ್ಟು ಸಂಖ್ಯೆಗಳಷ್ಟೇ ಪ್ರಕಟವಾಗಿದ್ದು, ವಿವರವಾದ ಅಂಕಿಅಂಶಗಳನ್ನು ನಂತರ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ಪರಿಷ್ಕರಣೆ ನಂತರ ರಾಜ್ಯದ ಒಟ್ಟು ಮತದಾರರ ಸಂಖ್ಯೆ 6,82,51,008ಕ್ಕೆ ಏರಿಕೆಯಾಗಿದೆ. ನ್ಯಾಯಮಂಡಳಿಗಳ ಆದೇಶಗಳ ಆಧಾರದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.
ಇದರ ನಡುವೆ, ಕಳೆದ ವಾರದ ವಿಶೇಷ ತೀವ್ರ ಪರಿಷ್ಕರಣೆ (SIR) ವರದಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 10.9 ಶೇಕಡಾ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಕೈಬಿಡಲಾಗಿದೆ ಎಂದು ವರದಿ ಹೇಳಿದೆ.

