ನವದೆಹಲಿ/ಹೈದರಾಬಾದ್: ಹಿರಿಯ ನಾಗರಿಕರೊಬ್ಬರನ್ನು ಡಿಜಿಟಲ್ ಬಂಧನದಲ್ಲಿರಿಸಿ 1.6 ಕೋಟಿ ರೂ. ಸುಲಿಗೆ ಮಾಡಿದ, ಸೈಬರ್ ವಂಚನೆಯ ಹಗರಣವನ್ನು ಸಿಬಿಐ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಮಾಜಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರನ್ನು ಬಂಧಿಸಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಬಂಧಿತ ಆರೋಪಿಗಳನ್ನು ಇಂಡಸ್ಲ್ಯಾಂಡ್ ಬ್ಯಾಂಕ್ ಮಾಜಿ ಸಹಾಯಕ ಮ್ಯಾನೇಜರ್ ಡುಬ್ಬಕ್ಕ ಮಹೇಶ್ ಹಾಗೂ ರಾಜೇಶ್ ಕನ್ನಾ ಹಾಗೂ ವಾಯಲ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಕಾಲ್ಪನಿಕ 'ಡಿಜಿಟಲ್ ಬಂಧನದ ' ಮೂಲಕ ಹಿರಿಯ ನಾಗರಿಕನನ್ನು ಬೆದರಿಸಿ, ಸುಲಿಗೆ ಮಾಡಿದ ಹಣವನ್ನು ನಕಲಿ ಕಂಪೆನಿಯೊಂದರ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣದ ಮೂಲವನ್ನು ಬಚ್ಚಿಡಲು ವಿವಿಧ ವಾಹಿನಿಗಳ ಮೂಲಕ ಈ ಹಣವು ಖಾತೆಗೆ ಹೋಗುವಂತೆ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಬ್ಯಾಂಕ್ ಖಾತೆಯನ್ನು ತೆರೆಯವುದಕ್ಕೆ ಮಹೇಶ್ ನೆರವಾಗಿದ್ದರೆ, ಇನ್ನಿಬ್ಬರು ಅಕ್ರಮ ಹಣದ ವರ್ಗಾವಣೆಯನ್ನು ವ್ಯವಸ್ಥೆಗೊಳಿಸಿದ್ದರೆಂದು ಸಿಬಿಐ ಆಪಾದಿಸಿದೆ.
ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯ ವೇಳೆ ಹಲವಾರು ಅಕ್ರಮ ದಾಖಲೆಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ, ಇದರಿಂದ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಸುಳಿವು ದೊರೆಯಬಹುದೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

