ನವದೆಹಲಿ: ಈ ತಿಂಗಳು ನಡೆಯುವ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 9ರ ಬೆಳಿಗ್ಗೆ 7ಗಂಟೆಯಿಂದ ಏಪ್ರಿಲ್ 29ರ ಸಂಜೆ 6.30ರ ವರೆಗೆ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವಂತಿಲ್ಲ, ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಅವಧಿಯಲ್ಲಿ ಮತಗಟ್ಟೆ ಸಮೀಕ್ಷೆಗಳನ್ನು ನಡೆಸಿ, ಪ್ರಸಾರ ಮಾಡುವುದು 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 126ಎ ಉಲ್ಲಂಘನೆ ಎಂದು ಎಚ್ಚರಿಸಿರುವ ಅದು, ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾದ ಪ್ರಕರಣ ಎಂದಿದೆ.
ಕೇರಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲಿ ಮತದಾನ ದಿನಾಂಕ ಏಪ್ರಿಲ್ 23ರಂದು ನಿಗದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಹಾಗೂ 29ರಂದು ಮತದಾನ ನಡೆಯಲಿದೆ.
ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಕೇರಳ ಹಾಗೂ ಅಸ್ಸಾಂನಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅಸ್ಸಾಂನಲ್ಲಿ ಸಂಜೆ 5ಕ್ಕೆ ಬಹಿರಂಗ ಪ್ರಚಾರ ಮುಗಿಸಬೇಕು.

