ನಾಗ್ಪುರ: 'ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವಿಲ್ಲ. ಈಗಾಗಲೇ ಅದು ಹಿಂದೂ ರಾಷ್ಟ್ರವಾಗಿದೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಿದ ವ್ಯಕ್ತಿಗಳನ್ನು ಗೌರವಿಸಲು ಸೋಮವಾರ ಇಲ್ಲಿನ ರೇಷ್ಮಿಬಾಗ್‌ನಲ್ಲಿ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಅಯೋಧ್ಯೆಯ ರಾಮಮಂದಿರವು ಅಧಿಕಾರದಲ್ಲಿರುವವರ ಬದ್ಧತೆ ಮತ್ತು ದೇಶದ ಪ್ರತಿಯೊಬ್ಬರ ಬೆಂಬಲದಿಂದ ನಿರ್ಮಾಣಗೊಂಡಿದೆ' ಎಂದಿದ್ದಾರೆ.
'ಒಂದು ಕಾಲದಲ್ಲಿ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ರಾಮಮಂದಿರ ನಿರ್ಮಾಣವಾಗುವವರೆಗೆ ಜನರು ಈ ಹೇಳಿಕೆಯನ್ನು ನೋಡಿ ನಗುತ್ತಿದ್ದರು. ಇಂದು ಅದೇ ಜನರು ಭಾರತವು ಹಿಂದೂಗಳ ಭೂಮಿ ಎಂದು ಹೇಳುತ್ತಿದ್ದಾರೆ' ಎಂದಿದ್ದಾರೆ.
'ಅನೇಕ ಜನರು ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸುವಂತೆ ನಮ್ಮನ್ನು ಕೇಳುತ್ತಾರೆ. ಆದರೆ, ಯಾವುದು ಈಗಾಗಲೇ ಸತ್ಯವೋ ಅದನ್ನು ಘೋಷಿಸುವ ಅಗತ್ಯವಿಲ್ಲ' ಎಂದು ತಿಳಿಸಿದ್ದಾರೆ.
'ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂದು ನಾವು ಘೋಷಿಸಬೇಕೇ? ಅದೇ ರೀತಿ ಭಾರತವು ಹಿಂದೂ ರಾಷ್ಟ್ರ ಎಂಬುದು ಈಗಾಗಲೇ ವಾಸ್ತವವಾಗಿದೆ ಮತ್ತು ಪ್ರತಿಯೊಬ್ಬರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಹಿಂದೆ? ಎಲ್ಲರೂ ಅದನ್ನು ಅಪಹಾಸ್ಯ ಮಾಡುತ್ತಿದ್ದರು' ಎಂದಿದ್ದಾರೆ.
'ಈ ಸನ್ಮಾನ ಸಮಾರಂಭವು ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಒಂದು ಮಾರ್ಗವಾಗಿದೆ. ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ. ಈಗ ನಾವು ನಮ್ಮ ಕೆಲಸವನ್ನು ಮಾಡಬೇಕು' ಎಂದು ಹೇಳಿದ್ದಾರೆ.

