ತ್ರಿಶ್ಶೂರ್: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ಅಹಂಕಾರಿ'ಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಟೀಕಿಸಿದರು.
ಜನರೊಂದಿಗೆ ಬೆರೆತು ಕೆಲಸ ಮಾಡುವ ಬದಲಾಗಿ, ಜನರನ್ನು ತುಳಿದು ಅಧಿಕಾರ ನಡೆಸುವ ಮನಃಸ್ಥಿತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಆಡಳಿತಾರೂಢ ಎಲ್ಡಿಎಫ್ ನಡುವಣ ಸ್ಪರ್ಧೆ. ಎಲ್ಡಿಎಫ್ಗೆ ಬಿಜೆಪಿ ಬೆಂಬಲ ಇದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅನ್ನು ತನ್ನ ಪ್ರಮುಖ ರಾಜಕೀಯ ಎದುರಾಳಿಯಾಗಿ ಬಿಜೆಪಿ ಕಾಣುತ್ತಿದೆ' ಎಂದು ಅವರು ಹೇಳಿದರು.
'ಸರ್ಕಾರವು ನೈಜ ಎಡರಂಗದಂತೆ ವರ್ತಿಸುತ್ತಿಲ್ಲ ಎಂದು ಸ್ವತಃ ಸಿಪಿಎಂ ಕಾರ್ಯಕರ್ತರೇ ಹೇಳುತ್ತಿದ್ದಾರೆ' ಎಂದು ಹೇಳಿದರು.
'ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೇ ಹೋದರೂ ದೇವರು, ದೇಗುಲ, ಧರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ ಕೇರಳದಲ್ಲಿ ಮಾತ್ರ ಶಬರಿಮಲೆ ಚಿನ್ನ ಕಳವಿನ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ ಮತ್ತು ಸಿಪಿಎಂ ರಕ್ಷಿಸುವ ಉದ್ದೇಶದಿಂದ ಈ ಬಗ್ಗೆ ಮಾತನಾಡುತ್ತಿಲ್ಲ' ಎಂದು ಟೀಕಿಸಿದರು.
ಎಲ್ಡಿಎಫ್ ತನ್ನ ಪ್ರಚಾರದಲ್ಲಿ 'ಪಿಣರಾಯಿ ಅವರನ್ನು ಬಿಟ್ಟು ಬೇರೆ ಯಾರಿದ್ದಾರೆ' ಎಂಬ ಘೋಷವಾಕ್ಯ ಬಳಸಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, 'ಮುಖ್ಯಮಂತ್ರಿ ಅವರು ದೇವರಲ್ಲ. ರಾಜ್ಯದಲ್ಲಿ ಮಹಿಳೆಯರು ಸೇರಿ ಸಾವಿರಾರು ಪ್ರತಿಭಾನ್ವಿತರಿದ್ದಾರೆ. ಇದು ರಾಜ್ಯದ ಜನರಿಗೆ ಮಾಡಿರುವ ಅವಮಾನ ಮತ್ತು ಅಹಂಕಾರದ ಪರಮಾವಧಿ' ಎಂದು ಹರಿಹಾಯ್ದರು.
'ಕೇಂದ್ರೀಯ ತನಿಖಾ ಸಂಸ್ಥೆಗಳು ಪಕ್ಷಪಾತಿ ಧೋರಣೆ ತೋರುತ್ತಿವೆ. ಅವರು ನನ್ನ ಸರ್ಕಾರಿ ನಿವಾಸವನ್ನು ಕಸಿದುಕೊಂಡರು, ವಿಚಾರಣೆ ನಡೆಸಿದರು, ನನ್ನ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ದೂರಿದರು.
ಹಿಮಂತ ಅತ್ಯಂತ ಭ್ರಷ್ಟ ಸಿಎಂ: ರಾಹುಲ್ ಗಾಂಧಿ ಆರೋಪಕೇರಳದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಪ್ರಣಾಳಿಕೆ ಬಿಡುಗಡೆ ಮಾಡಿದ Uಆಈ
ಬಿಜೆಪಿ ಜತೆ ಸಿಪಿಎಂ 'ಒಪ್ಪಂದ': ಪ್ರಿಯಾಂಕಾ
ಕಣ್ಣೂರು: ಕೇರಳ ವಿಧಾನಸಭೆ ಚುನಾವಣೆಗಾಗಿ ಸಿಪಿಎಂ ನೇತೃತ್ವದ ಎರಡಂಗವು ಬಿಜೆಪಿಯೊಂದಿಗೆ 'ಒಪ್ಪಂದ' ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು. ಆಡಳಿತಾರೂಢ ಎಲ್ಡಿಎಫ್ ಮುಂದಿನ 10 ವರ್ಷ ಅಧಿಕಾರದಲ್ಲಿ ಇರಲು ತನ್ನ ಸಿದ್ಧಾಂತ ಹೊಣೆಗಾರಿಕೆಯೊಂದಿಗೆ 'ಹೊಂದಾಣಿಕೆ' ಮಾಡಿಕೊಂಡಿದೆ ಎಂದೂ ದೂರಿದರು. ಪಶ್ಚಿಮ ಏಷ್ಯಾ ಸಂಘರ್ಷದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

