ಲೆಬನಾನ್: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಪಡೆಗಳ ಮೇಲೆ ಸಂಘಟಿತ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಪ್ರಕಟಿಸಿದೆ. ಹಲವು ಕಡೆಗಳಲ್ಲಿ ಇಸ್ರೇಲ್ ಸೇನಾ ಪಡೆ ಮತ್ತು ಸೇನಾ ಸಾಧನಗಳನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂದು ಹೇಳಿಕೆ ನೀಡಿದೆ.
ಇಸ್ರೇಲಿ ಸೈನಿಕರ ಸಭೆಯೊಂದರ ಮೇಲೆ ಹಾಗೂ ಸೇನಾ ವಾಹನದ ಮೇಲೆ ಅಲ್-ಖಂತರದಲ್ಲಿ ಎರಡು ಪ್ರತ್ಯೇಕ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಮುಖಂಡರ ಹೇಳಿಕೆಯನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ಮೂಲಕ ಇಸ್ರೇಲ್‌ನ ಹರ್ಮ್ಸ್ 450 ಡ್ರೋನ್ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಇದರ ಜೊತೆಗೆ ರಮಯ್ಯಾದಲ್ಲಿ ಇಸ್ರೇಲ್‌ನ ಸಶಸ್ತ್ರ ಪಡೆ ಯೋಧರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ. ಸೂಕ್ತ ಶಸ್ತ್ರಾಸ್ತ್ರಗಳೊಂದಿಗೆ ಅಲ್-ಖಂತರದ ಪ್ರವೇಶ ದ್ವಾರದಲ್ಲಿ ಮಿಲಿಟರಿ ವಾಹನದ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್ ಜತೆ ಐತಿಹಾಸಿಕ ಶಾಂತಿ ಒಪ್ಪಂದ ಪ್ರಕ್ರಿಯೆ ಪ್ರಗತಿಯಲ್ಲಿರುವ ವೇಳೆ ಹಿಜ್ಬುಲ್ಲಾ ವಿಶ್ವಾಸದ್ರೋಹ ಎಸಗಿದೆ ಎಂದು ಆಪಾದಿಸಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಮೂರು ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಮುಂದುವರಿದ ಅಂಗವಾಗಿ ಒಪ್ಪಂದ ಮಾತುಕತೆ ನಡೆಯುತ್ತಿದೆ. ಆದರೆ ಈ ಪ್ರಯತ್ನಗಳನ್ನು ಹಿಜ್ಬುಲ್ಲಾ ಕಡೆಗಣಿಸಿದೆ ಎಂದು ದೂರಿದ್ದಾರೆ.

