ಟೆಹರಾನ್: ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ಇರಾನ್ ನಿಯೋಗವು ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಬಂದಿಳಿದಿದೆ. ಇರಾನ್ ಸರ್ಕಾರದ ವಕ್ತಾರ ಇಸ್ಮಾಯಿಲ್ ಬುಕಾಯ್ ಹಾಗೂ ಇತರರು ಈ ನಿಯೋಗದಲ್ಲಿದ್ದಾರೆ.
ಅರಾಘ್ಚಿ ನೇತೃತ್ವದ ನಿಯೋಗವು ಇಸ್ಲಾಮಾಬಾದ್‌ಗೆ ಭೇಟಿ ನೀಡಿದೆ.
ಆದರೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಿಗದಿಯಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯವು ಸ್ಪಷ್ಟಪಡಿಸಿದೆ.
ಪ್ರಾದೇಶಿಕ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನದ ನಾಯಕರೊಂದಿಗೆ ಮಾತುಕತೆ ನಡೆಸಲು ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯ್ ಹೇಳಿದ್ದಾರೆ. ಈ ಭೇಟಿಯ ಸಮಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ನೇರ ಸಭೆಗಳು ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ನಾವು ಅಧಿಕೃತ ಭೇಟಿಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸಿದ್ದೇವೆ. ಅಮೆರಿಕ ಹೇರಿರುವ ಆಕ್ರಮಣಕಾರಿ ಯುದ್ಧವನ್ನು ಕೊನೆಗೊಳಿಸಲು ಮತ್ತು ನಮ್ಮ ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪಾಕಿಸ್ತಾನ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಪೂರಕವಾಗಿ ವಿದೇಶಾಂಗ ಸಚಿವ ಅರಾಘ್ಚಿ ಅವರು ಪಾಕ್ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ' ಎಂದು ಬಕಾಯ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಸಭೆ ನಿಗದಿಯಾಗಿಲ್ಲ. ನಮ್ಮ ಅಭಿಪ್ರಾಯಗಳನ್ನು ಪಾಕಿಸ್ತಾನಕ್ಕೆ ತಿಳಿಸಲಾಗುವುದು' ಎಂದು ಅವರು ಹೇಳಿದ್ದಾರೆ.
ಅರಾಘ್ಚಿ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಶಾಂತಿ ಮಾತುಕತೆ ಬಳಿಕ ಅರಾಘ್ಚಿ ಅವರು ಒಮಾನ್ ಮತ್ತು ರಷ್ಯಾಕ್ಕೂ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಇರಾನ್ ಜೊತೆಗಿನ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಶ್ವೇತ ಭವನ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ರಾಜತಾಂತ್ರಿಕ ಸಂವಹನದ ಹೊಸ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.

