ಕರಡು ತಿದ್ದುಪಡಿಗಳು ಅಂತರ ಇಲಾಖಾ ಸಮಿತಿಯು ಸ್ವೀಕರಿಸಿದ ದೂರುಗಳಲ್ಲಿ ಸುದ್ದಿ ಸೃಷ್ಟಿಕರ್ತರು ತಪ್ಪಿತಸ್ಥರೆಂದು ಕಂಡು ಬಂದರೆ ಅವರನ್ನು ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅಧಿಕಾರ ನೀಡುತ್ತವೆ. ಅಂತಹ ಕ್ರಿಯೇಟರ್ಗಳು ಕ್ಷಮೆ ಯಾಚಿಸುವುದನ್ನು ಅಥವಾ ಕಂಟೆಂಟ್ ನಲ್ಲಿ ಬದಲಾವಣೆಯನ್ನು ಮಾಡುವುದನ್ನು ಸಚಿವಾಲಯವು ಅಗತ್ಯವಾಗಿಸಬಹುದು.
ಇದರ ಜೊತೆಗೆ ಸಚಿವಾಲಯವು ಯೂ ಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಹೊರಡಿಸುವ ಯಾವುದೇ ಸಲಹೆಗಳನ್ನು ಅವು ಪಾಲಿಸದಿದ್ದರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 79ರಡಿ ಅವುಗಳ ಸುರಕ್ಷತೆ ನಿಬಂಧನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಈ ಸುರಕ್ಷತೆಯನ್ನು ಕಳೆದುಕೊಂಡರೆ ಈ ಪ್ಲ್ಯಾಟ್ಫಾರ್ಮ್ಗಳು ಪ್ರಶ್ನಾರ್ಹ ವಿಷಯಕ್ಕೆ ಹೊಣೆಗಾರರಾಗುತ್ತವೆ.
ಸಚಿವಾಲಯವು ಹೊರಡಿಸಿದ ಸ್ಪಷ್ಟೀಕರಣಗಳು, ಸಲಹೆಗಳು,ನಿರ್ದೇಶನಗಳು,ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು (ಎಸ್‌ಒಪಿಗಳು),ಸಂಹಿತೆಗಳು ಮತ್ತು ಮಾರ್ಗಸೂಚಿಗಳನ್ನು ಈ ಪ್ಲ್ಯಾಟ್ಫಾರ್ಮ್ಗಳು ಪಾಲಿಸುವುದನ್ನು ಕಡ್ಡಾಯಗೊಳಿಸಲು ಪ್ರಸ್ತಾವನೆಯು ಉದ್ದೇಶಿಸಿದೆ.
ನೂತನ ಪ್ರಸ್ತಾವನೆಯು ಈವರೆಗೆ ವೃತ್ತಿಪರ ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳ ಭಾಗ ಮೂರಕ್ಕೆ ತರಲಾಗಿರುವ ಬದಲಾವಣೆಗಳಲ್ಲಿ ಸೇರಿದೆ.
ಕರಡು ತಿದ್ದುಪಡಿಗಳು ಎ.14ರವರೆಗೆ ಸಾರ್ವಜನಿಕ ಸಮಾಲೋಚನೆಗಳಿಗೆ ಮುಕ್ತವಾಗಿವೆ.
ನಿಯಮಗಳಿಗೆ ಮಾಡಲಾಗಿರುವ ತಿದ್ದುಪಡಿಗಳು ಈಗಿರುವಂತೆಯೇ ಅಂತಿಮಗೊಂಡರೆ ಸರಕಾರವು ಕಂಪನಿಗಳ ಫ್ಲ್ಯಾಟ್ಫಾರ್ಮ್ಗಳಲ್ಲಿ ಸುದ್ದಿ ಸೃಷ್ಟಿಕರ್ತರ ಕುರಿತು ಮಾಹಿತಿಗಳನ್ನು ಒದಗಿಸುವಂತೆ ಅವುಗಳಿಗೆ ಸೂಚಿಸಬಹುದು ಮತ್ತು ಅವರಿಗೆ ನೇರವಾಗಿ ನಿರ್ಬಂಧ ಆದೇಶಗಳನ್ನು ಕಳುಹಿಸಬಹುದು ಎಂದು ಹೆಸರು ಹೇಳಿಕೊಳ್ಳಲು ಬಯಸದ ಸರಕಾರಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

