ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಧಕ್ಕೆ ತರುವಂತಹ ಬೆದರಿಕೆ ಸಂದೇಶ ಕಳುಹಿಸಿದ ಆರೋಪದ ಮೇಲೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಮಲ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಈತ ಅಮೆರಿಕದ ಗುಪ್ತಚರ ಸಂಸ್ಥೆ Central Intelligence Agency (ಸಿಐಎ)ಗೆ ಸಂದೇಶ ಕಳುಹಿಸಿದ್ದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕೆಲವು ಸಮಯದಿಂದ ಇಂಟರ್‌ನೆಟ್ ಮೂಲಕ ವಿದೇಶದಲ್ಲಿರುವ ಅನುಮಾನಾಸ್ಪದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ. ಪ್ರಧಾನಿ ಮತ್ತು ಅವರ ಕಚೇರಿ (ಪಿಎಂಒ)ಗೆ ಸಂಬಂಧಿಸಿದ ಮಾಹಿತಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಮಾಹಿತಿಗೆ ಪ್ರತಿಯಾಗಿ ಭಾರೀ ಮೊತ್ತದ ಹಣವನ್ನು ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನ ಬಳಿ ಇದ್ದ ಲ್ಯಾಪ್ಟಾಪ್, ಮೊಬೈಲ್ ಫೋನ್ ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಮೊಬೈಲ್‌ನಲ್ಲಿ ಹಲವು ವಿಪಿಎನ್‌ಗಳು ಹಾಗೂ ಡಾರ್ಕ್ ವೆಬ್ ಪ್ರವೇಶಿಸಲು ಬಳಸುವ ಅಪ್ಲಿಕೇಶನ್‌ಗಳು ಪತ್ತೆಯಾಗಿವೆ.
ವಿಚಾರಣೆಯಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದಕ್ಕೂ ಮೊದಲು ಕೋಲ್ಕತ್ತಾ ವಿಮಾನ ನಿಲ್ದಾಣದ ವೆಬ್‌ಸೈಟ್ ಹ್ಯಾಕ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಅವನು ಭಾಗಿಯಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ಕುರಿತು ಪೊಲೀಸರು ಹಾಗೂ ಕೇಂದ್ರ ಸಂಸ್ಥೆಗಳು ಮುಂದಿನ ತನಿಖೆ ಮುಂದುವರಿಸಿದ್ದಾರೆ.

