ನವದೆಹಲಿ: ಮಹಿಳಾ ಮೀಸಲಾತಿ ತಿದ್ದುಪಡಿ ವಿರುದ್ಧ ಪ್ರತಿಭಟಿಸಿದ್ದ ಡಿಎಂಕೆ ಪಕ್ಷಕ್ಕೆ 'ಕಾಲಾ ಟಿಕಾ' ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನಿಮೋಳಿ ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ತಿದ್ದುಪಡಿ ವಿರುದ್ಧ ಪ್ರತಿಭಟಿಸಿ ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿ ಬಂದಿದ್ದ ಡಿಎಂಕೆ ಸಂಸದರನ್ನು ಉದ್ದೇಶಿಸಿ 'ಕಾಲಾ ಟಿಕಾ' ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸದೆ ಕನಿಮೋಳಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾನೂನಿನ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಡಿಎಂಕೆ ಸದಸ್ಯರನ್ನು ಟೀಕಿಸಿದ್ದರು. 'ಇದು ಕೆಟ್ಟ ದೃಷ್ಟಿಯನ್ನು ದೂರ ಮಾಡಲು 'ಕಾಲಾ ಟಿಕಾ'ದಂತೆ ಕೆಲಸ ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದರು.
'ಕಪ್ಪು ಬಟ್ಟೆ ಮತ್ತು ಧ್ವಜಗಳ ಬಗ್ಗೆ ಉಲ್ಲೇಖಿಸಿದ ಅವರು, ಒಳ್ಳೆಯ ಕೆಲಸವನ್ನು ಶುರು ಮಾಡುವ ಮೊದಲು 'ಕಾಲಾ ಟಿಕಾ' ಹಚ್ಚುವ ಸಂಪ್ರದಾಯವಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದಿದ್ದರು.
ಶುಕ್ರವಾರ ನಡೆದ ಚರ್ಚೆಯಲ್ಲಿ ಕಪ್ಪು ಸೀರೆಯಲ್ಲಿ ಭಾಗವಹಿಸಿದ ಕನಿಮೋಳಿ, 'ಹಿಂದುತ್ವವನ್ನು ರಕ್ಷಿಸುವುದಕ್ಕಾಗಿಯೇ ಇದುವವರಿಗೆ ಕಪ್ಪು ಬಟ್ಟೆ ಧರಿಸುವ ದೇವತೆ ಕಾಳಿ ನೆನಪಾಗದಿರುವುದು ಆಶ್ಚರ್ಯ ತಂದಿದೆ. ಡಿಎಂಕೆಯ ಬೌದ್ಧಿಕ ನಾಯಕ ಪೆರಿಯಾರ್ ಅವರ ಬಣ್ಣವೂ ಕಪ್ಪು ಆಗಿತ್ತು. ಅವರು ಕೊನೆಯವರೆಗೂ ಹೋರಾಡುವುದನ್ನು ಕಲಿಸಿದ್ದಾರೆ' ಎಂದು ಆಕ್ರೋಶ ಹೊರ ಹಾಕಿದರು.
ಇತ್ತ ಸದನದಲ್ಲಿ ಡಿಎಂಕೆ ಸದಸ್ಯರು ಕಪ್ಪು ಬಟ್ಟೆ ಧರಿಸಿದ್ದರೆ, ಅತ್ತ ತಮಿಳುನಾಡಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರಾಜ್ಯದಲ್ಲಿ ಕಪ್ಪು ಧ್ವಜ ಹಾರಿಸಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯ ಪ್ರತಿಯನ್ನು ಸುಟ್ಟು, ತಮಿಳು ಜನರನ್ನು ಅವರ ಸ್ವಂತ ನೆಲದಲ್ಲಿ ನಿರಾಶ್ರಿತರಾಗಿಸಲು ಪ್ರಯತ್ನಿಸುವ ಕಪ್ಪು ಕಾನೂನು ಎಂದು ಕಿಡಿ ಹಾಕಿದರು.

