ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಶಾಶ್ವತ ಕದನ ವಿರಾಮ ಮಾತುಕತೆ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಅತ್ಯುತ್ತಮ ಪ್ರಸ್ತಾವನೆಯನ್ನು ಮುಂದಿಟ್ಟಿತ್ತಾದರೂ, ಇರಾನ್ ಅದನ್ನು ಸ್ವೀಕರಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಯು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ ಕಾರಣ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿದೆ.ಪ್ರಮುಖ ಸಂಗತಿಗಳು• ಮಾತುಕತೆಯ ವಿಫಲತೆಗೆ ಕಾರಣಗಳುಹೊರ್ಮುಜ್ ಜಲಸಂಧಿಯ ಬಳಕೆ, ಯುರೇನಿಯಂ ಸಮೃದ್ಧೀಕರಣ ಮತ್ತು ವಿದೇಶಗಳಲ್ಲಿ ಜಪ್ತಿಯಾಗಿರುವ 27 ಬಿಲಿಯನ್ ಡಾಲರ್ ಹಣದ ಬಿಡುಗಡೆ ವಿಚಾರದಲ್ಲಿ ಸಹಮತ ಮೂಡದಿದ್ದರಿಂದ ಒಪ್ಪಂದ ವಿಫಲವಾಯಿತು.• ಹೊರ್ಮುಜ್ ಜಲಸಂಧಿಯ ವಿವಾದಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮುಕ್ತಗೊಳಿಸಬೇಕೆಂಬ ಅಮೆರಿಕದ ಒತ್ತಾಯಕ್ಕೆ, ತಮ್ಮ ಮೇಲಿನ ಹಿಡಿತವನ್ನು ಬಿಟ್ಟುಕೊಡಲು ಇರಾನ್ ನಿರಾಕರಿಸಿತು.• ಆರ್ಥಿಕ ಬೇಡಿಕೆಗಳ ತಿರಸ್ಕಾರತೈಲ ಆದಾಯದ ಹಣವನ್ನು ಬಿಡುಗಡೆ ಮಾಡಬೇಕೆಂಬ ಇರಾನ್‌ನ ಬೇಡಿಕೆಯನ್ನು ಅಮೆರಿಕ ತಿರಸ್ಕರಿಸಿತು ಮತ್ತು ಯುರೇನಿಯಂ ದಾಸ್ತಾನಿನ ವಿಚಾರದಲ್ಲೂ ಯಾವುದೇ ರಾಜಿ ಸೂತ್ರ ಸಿಗಲಿಲ್ಲ.• ಸಭೆಯ ಸಕಾರಾತ್ಮಕ ಬೆಳವಣಿಗೆಒಪ್ಪಂದ ಏರ್ಪಡದಿದ್ದರೂ, ದಶಕಗಳ ಹಗೆತನದ ನಂತರ ಉಭಯ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಭೇಟಿಯಾಗಿ ಚರ್ಚಿಸಿದ್ದು ರಾಜತಾಂತ್ರಿಕವಾಗಿ ಒಂದು ಪ್ರಗತಿಯ ಸಂಕೇತವಾಗಿದೆ.• ಸುದೀರ್ಘ ಸಭೆಯ ಹಿನ್ನೆಲೆಇಸ್ಲಾಮಾಬಾದ್‌ನಲ್ಲಿ ನಡೆದ ಈ ಸಭೆಯು ಸತತ 21 ಗಂಟೆಗಳ ಕಾಲ ನಡೆಯಿತು, ಅದರಲ್ಲಿ ಎರಡೂ ದೇಶಗಳ ಪ್ರಭಾವಿ ನಾಯಕರು ಪಾಲ್ಗೊಂಡಿದ್ದರು.ಪ್ರಮುಖ ಅಂಕಿಅಂಶಗಳು21 ಗಂಟೆಮಾತುಕತೆಯ ಅವಧಿ27 ಬಿಲಿಯನ್ ಡಾಲರ್ಜಪ್ತಿಯಾಗಿರುವ ಇರಾನ್ ಹಣ900 ಪೌಂಡ್ಯುರೇನಿಯಂ ದಾಸ್ತಾನುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಒಂದೇ ಸಭೆಯಲ್ಲಿ ಕದನ ವಿರಾಮ ಒಪ್ಪಂದ ನಡೆಯುವ ನಿರೀಕ್ಷೆ ಮೊದಲೇ ಇರಲಿಲ್ಲ: ಇರಾನ್
ಇಸ್ಲಾಮಾಬಾದ್‌ನ ಸೆರೆನಾ ಹೋಟೆಲ್‌ನಲ್ಲಿ ಇರಾನ್ ಹಾಗೂ ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ 21 ಗಂಟೆಗಳ ಸುದೀರ್ಘ ಸಭೆ ನಡೆಯಿತಾದರೂ ಒಪ್ಪಂದ ಏರ್ಪಡಲಿಲ್ಲ. 'ನಮ್ಮ ಮಿತಿಗಳು ಏನು? ನಾವು ಯಾವ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದೇವೆ, ಯಾವುದರಲ್ಲಿ ರಾಜಿ ಇಲ್ಲ ಎನ್ನುವುದನ್ನು ಅವರಿಗೆ ತಿಳಿಸಿದ್ದೇವೆ' ಎಂದು ವ್ಯಾನ್ಸ್ ಮಾತುಕತೆ ಬಳಿಕ ಹೇಳಿದ್ದಾರೆ. ಆದರೆ ಆ ನಿರ್ದಿಷ್ಟ ಮಿತಿಗಳು ಯಾವುವು ಎಂಬುದನ್ನು ವ್ಯಾನ್ಸ್ ಬಹಿರಂಗಪಡಿಸಲಿಲ್ಲ.
ಮಾತುಕತೆಗೆ ಮುನ್ನ ಎರಡೂ ದೇಶಗಳು ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳು ಹಲವು ನಿರ್ಣಾಯಕ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿಯಬಹುದು ಎನ್ನುವುದನ್ನು ಸೂಚಿಸಿದ್ದವು. ಕದನ ವಿರಾಮ ಲೆಬನಾನ್‌ನಲ್ಲಿನ ಸಂಘರ್ಷಕ್ಕೂ ಅನ್ವಯಿಸುತ್ತದೆಯೇ ಎಂಬ ವಿಷಯದಲ್ಲೂ ಉಭಯ ದೇಶಗಳ ನಡುವೆ ಸಹಮತವಿರಲಿಲ್ಲ. ಈ ವಿವಾದವು ಸಭೆಯನ್ನೇ ರದ್ದುಗೊಳಿಸುವ ಹಂತಕ್ಕೆ ತಲುಪಿತ್ತು. ಅದಾಗ್ಯೂ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಯಿತು.
ಮೂರು ಪ್ರಮುಖ ವಿಷಯಗಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳಿಂದ ಒಪ್ಪಂದ ಸಾಧ್ಯವಾಗಿಲ್ಲ ಎಂದು ಮಾತುಕತೆಯ ಬಗ್ಗೆ ವಿವರ ಇರುವ ಇರಾನ್ ನ ಮೂವರು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು: ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು
ಎರಡು: ಸುಮಾರು 900 ಪೌಂಡ್ ತೂಕದ ಸಮೃದ್ಧೀಕರಿಸಿದ ಯುರೇನಿಯಂನ ಭವಿಷ್ಯ
ಮೂರು: ವಿದೇಶಗಳಲ್ಲಿ ಜಪ್ತಿ ಮಾಡಲಾಗಿರುವ ಸುಮಾರು 27 ಬಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡಬೇಕೆಂಬ ಇರಾನ್‌ನ ಬೇಡಿಕೆ.
ಅಮೆರಿಕ-ಇರಾನ್ 21 ಗಂಟೆಗಳ ಚರ್ಚೆ: ಮೂಡದ ಒಮ್ಮತ, ಇಸ್ಲಾಮಾಬಾದ್ ಮಾತುಕತೆ ವಿಫಲ
ಹೊರ್ಮುಜ್ ಜಲಸಂಧಿಯಲ್ಲಿ ಎಲ್ಲಾ ರೀತಿಯ ಹಡುಗಳುಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಅಮೆರಿಕ ಒತ್ತಾಯಿಸಿತ್ತು. ಆದರೆ, ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ನಿರ್ಣಾಯಕವಾಗಿರುವ ಈ ಪ್ರದೇಶದ ಮೇಲಿನ ತನ್ನ ಹಿಡಿತವನ್ನು ಬಿಟ್ಟುಕೊಡಲು ಇರಾನ್ ನಿರಾಕರಿಸಿದೆ. ಅಂತಿಮ ಶಾಂತಿ ಒಪ್ಪಂದದ ನಂತರವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಆರು ವಾರಗಳ ದಾಳಿಯಿಂದಾದ ಹಾನಿಗೆ ಪರಿಹಾರ ನೀಡಬೇಕು, ಇರಾಕ್, ಲಕ್ಸೆಂಬರ್ಗ್, ಬಹರೇನ್, ಜಪಾನ್, ಕತಾರ್, ಟರ್ಕಿ ಮತ್ತು ಜರ್ಮನಿಗಳಲ್ಲಿ ಮುಟ್ಟುಗೋಲು ಹಾಕಿರುವ ತೈಲ ಆದಾಯದ ಹಣವನ್ನು ಪುನರ್ನಿರ್ಮಾಣ ಕಾರ್ಯಕ್ಕಾಗಿ ಬಿಡುಗಡೆ ಮಾಡಬೇಕು ಎಂದು ಇರಾನ್ ಕೋರಿದೆ. ಆದರೆ ಈ ಬೇಡಿಕೆಯನ್ನು ಅಮೆರಿಕ ತಿರಸ್ಕರಿಸಿದೆ.
ಇರಾನ್ ಬಳಿಯಿರುವ ಸಮೃದ್ಧೀಕರಿಸಿದ ಯುರೇನಿಯಂ ದಾಸ್ತಾನನ್ನು ಹಸ್ತಾಂತರಿಸಬೇಕು ಅಥವಾ ಮಾರಾಟ ಮಾಡಬೇಕು ಎಂಬ ವಿಷಯದ ಬಗ್ಗೆಯೂ ತರ್ಕ ನಡೆಯಿತು. ಇದಕ್ಕೆ ಇರಾನ್ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಿದರೂ, ಎರಡೂ ಕಡೆಯವರು ಯಾವುದೇ ರಾಜಿ ಸೂತ್ರಕ್ಕೆ ಬರಲು ಸಾಧ್ಯವಾಗಲಿಲ್ಲ.
ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆ: ಮೂಡದ ಒಮ್ಮತ, ನಡೆಯದ ಒಪ್ಪಂದ
ಒಪ್ಪಂದವಿಲ್ಲದೆ ಮಾತುಕತೆಯ ಮುಕ್ತಾಯಗೊಂಡಿದ್ದರೂ, ಈ ಸಭೆ ನಡೆದಿದ್ದೇ ಒಂದು ಪ್ರಗತಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಕೇವಲ ಆರು ವಾರಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಅಧಿಕಾರಿಗಳು ಶಪಥ ಮಾಡಿದ್ದರು. ಅಂತಹ ಸಂದರ್ಭದಲ್ಲಿ ಉಭಯ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳ ಭೇಟಿ ಅಸಾಧ್ಯವೆಂದೇ ಭಾವಿಸಲಾಗಿತ್ತು.
ಇರಾನ್ ನಿಯೋಗದ ನೇತೃತ್ವ ವಹಿಸಿ ಸಂಸತ್ತಿನ ಮುಖ್ಯಸ್ಥ ಮತ್ತು ಪ್ರಭಾವಿ ಮಿಲಿಟರಿ ಕಮಾಂಡರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರು ಅಮೆರಿಕ ಉಪಾಧ್ಯಕ್ಷ ಜೆ.ಡಿವ್ಯಾನ್ಸ್ ಅವರನ್ನು ಮುಖಾಮುಖಿಯಾಗಿ ಭೇಟಿಯಾದರು. ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿದರು. ಮಾತುಕತೆಯು ಸೌಹಾರ್ದಯುತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರಾಜತಾಂತ್ರಿಕ ಯಶಸ್ಸು ಸಿಗದಿದ್ದರೂ, ದಶಕಗಳ ಹಗೆತನ ಮತ್ತು ಇರಾನ್‌ನಲ್ಲಿ ಕೇಳಿಬರುತ್ತಿದ್ದ 'ಅಮೆರಿಕಕ್ಕೆ ಸಾವು' ಎಂಬ ಘೋಷಣೆಗಳ ನಡುವೆ ಇದ್ದ ಅಡೆತಡೆಯೊಂದು ಈ ಭೇಟಿಯ ಮೂಲಕ ನಿವಾರಣೆಯಾಗಿದೆ.

