ನವದೆಹಲಿ: ಇರಾನ್‌ನಿಂದ ತೈಲ ಹೊತ್ತು ಸಾಗುತ್ತಿದ್ದ ಟ್ಯಾಂಕರ್ ಸಂಚಾರದ ಮಧ್ಯದಲ್ಲಿ ದಿಢೀರ್ ಮಾರ್ಗ ಬದಲಿಸಿದ್ದು, ಚೀನಾ ಕಡೆಗೆ ಹೊರಟಿದೆ. ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಈ ರೀತಿಯಾಗಿದ್ದು, ಇರಾನ್‌ನಿಂದ ತೈಲ ಸರಬರಾಜಿನ ಸವಾಲನ್ನು ಎತ್ತಿ ತೋರಿಸುತ್ತಿದೆ ಎಂದು ವರದಿ ತಿಳಿಸಿದೆ.
2002ರಲ್ಲಿ ತಯಾರಿಸಲಾದ 80,000 ಟನ್‌ನಿಂದ 1,20,000 ಟನ್‌ವರೆಗೆ ಸರಕು ಸಾಗಣೆ ಸಾಮರ್ಥ್ಯದ 'ಪಿಂಗ್ ಶನ್' ಎಂಬ ಹೆಸರಿನ ಹಡಗು ಇದಾಗಿದ್ದು, 2025ರಲ್ಲಿ ಅಮೆರಿಕ ಇದರ ಮೇಲೆ ನಿರ್ಬಂಧ ಹೇರಿತ್ತು. ಭಾರತದ ಕಡೆ ಹೊರಟಿದ್ದ ಆ ಹಡಗು ಈಗ ಚೀನಾದ ಡೊಂಗ್ಯಿಂಗ್ ಬಳಿ ಸಂಚಾರ ನಡೆಸುತ್ತಿದೆ.
ಹಡಗು ಗುಜರಾತ್‌ನ ವಡೀನಾರ್‌ಗೆ ತೆರಳಬೇಕಿತ್ತು. ಪ್ರಯಾಣ ಆರಂಭವಾದಾಗ ಭಾರತದ ಕಡೆಗೆ ಸಂಚರಿಸುವ ಸಂಕೇತ ತೋರಿಸಿತ್ತು ಎಂದು ಶಿಪ್ ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ ಹೇಳಿದೆ.
ವಾಣಿಜ್ಯ ಹಡಗುಗಗಳಲ್ಲಿ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸದ್ಯ ಈ ಹಡಗು ಮತ್ತೆ ಮಾರ್ಗ ಬದಲಿಸುವ ಸೂಚನೆ ಇಲ್ಲ ಎಂದು ವರದಿ ತಿಳಿಸಿದೆ.
'ಕಳೆದ ಮೂರು ದಿನಗಳಿಂದ ಭಾರತದ ವಡೀನಾರ್‌ಗೆ ಹೊರಟಿದ್ದ ಇರಾನ್ ಮೂಲದ ಕಚ್ಚಾ ತೈಲ ಸಾಗಣೆಯ ಹಡಗು 'ಪಿಂಗ್ ಶನ್' ಗಮ್ಯಸ್ಥಾನಕ್ಕೆ ಸ್ವಲ್ಪ ದೂರದಲ್ಲಿರುವಾಗಲೇ ಮಾರ್ಗ ಬದಲಿಸಿ ಚೀನಾ ಕಡೆಗೆ ಹೊರಟಿದೆ' ಎಂದು ಕೆಪ್ಲರ್‌ನ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ತಿಳಿಸಿದ್ದಾರೆ.
ವಿವಿಧ ದೇಶಗಳಿಂದ ತೈಲ ಖರೀದಿಗೆ ಇದ್ದ ನಿರ್ಬಂಧದ ಮೇಲೆ ಅಮೆರಿಕ ಇತ್ತೀಚೆಗೆ ವಿನಾಯಿತಿ ಘೋಷಿಸಿದ ಬಳಿಕ 2019ರಿಂದ ಇದೇ ಮೊದಲ ಬಾರಿಗೆ ಪಿಂಗ್ ಶನ್ ಹಡಗಿನ ಮೂಲಕ ಭಾರತವು ತೈಲ ಖರೀದಿ ಮಾಡಿದಂತಿದೆ ಎಂದು ವರದಿ ತಿಳಿಸಿದೆ.
ರಿಟೋಲಿಯಾ ಅವರ ಪ್ರಕಾರ, ತೈಲ ಖರೀದಿದಾರರು ಪಾವತಿ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿರುವುದರಿಂದ ಹಡಗು ಮಾರ್ಗ ಬದಲಿಸಿದಂತೆ ಕಾಣುತ್ತಿದೆ. ಆದರೆ, ತೈಲ ಖರೀದಿದಾರರು ಮತ್ತು ಮಾರಾಟಗಾರರ ಮಾಹಿತಿ ಲಭ್ಯವಾಗಿಲ್ಲ.
ವಡೀನಾರ್ ನಗರವು ರಷ್ಯಾದ ತೈಲ ದೈತ್ಯ ರೋಸ್‌ನೆಫ್ಟ್ ಬೆಂಬಲಿತ ನಯಾರಾ ಎನರ್ಜಿ ತೈಲ ಸಂಸ್ಕರಣಾಗಾರದ ನೆಲೆಯಾಗಿದ್ದು, ವರ್ಷಕ್ಕೆ 20 ಮಿಲಿಯನ್ ಟನ್ ತೈಲ ಸಂಸ್ಕರಣೆ ಮಾಡಲಾಗುತ್ತದೆ.
ಈ ರೀತಿ ತೈಲ ಹಡಗಿನ ಮಾರ್ಗ ಬದಲಾವಣೆಯು ಸಾಮಾನ್ಯವಲ್ಲ. ಜಾಗತಿಕ ಉದ್ವಿಗ್ನತೆ ನಡುವೆ ಸರಬರಾಜು ಮತ್ತು ಪಾವತಿ ವ್ಯವಸ್ಥೆಯ ಗೊಂದಲದಿಂದಾಗಿ ಈ ಬದಲಾವಣೆ ಆದಂತಿದೆ ಎಂದು ಅವರು ಹೇಳಿದ್ದಾರೆ.

