ಹದ್ದಿನ ಕಣ್ಣಿನಂತೆ ಕೆಲಸ ಮಾಡುವ ಸಿಸಿಟಿವಿ ಕ್ಯಾಮೆರಾಗಳು ಈಗ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಇದೇ ಕ್ಯಾಮೆರಾಗಳು ದೇಶದ ಭದ್ರತೆಗೆ ಕುತ್ತು ತರುತ್ತಿವೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಕೆಲವು ಸಿಸಿಟಿವಿ ಕ್ಯಾಮೆರಾಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಿದೆ.
ಪ್ರಮುಖವಾಗಿ ಇಂಟರ್‌ನೆಟ್ ಸಂಪರ್ಕವಿರುವ ಚೀನಾ ಮೂಲದ ಹೈಕ್-ವಿಷನ್, ಟಿಪಿ-ಲಿಂಕ್, ದಹುವಾ ಕಂಪನಿಗಳ ಸಿಸಿಟಿವಿ ಕ್ಯಾಮೆರಾಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಕಠಿಣ ನಿರ್ಬಂಧ ಹೇರಲಾಗಿದೆ.
ಇದಕ್ಕಾಗಿ ಹೊಸ ಪ್ರಮಾಣಿತ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಕ್ಯಾಮೆರಾದಲ್ಲಿ ಬಳಸುವ ಚಿಪ್‌ಸೆಟ್ ಯಾವ ದೇಶದ್ದು ಮತ್ತು ಅದು ಎಷ್ಟು ಸುರಕ್ಷಿತ ಎಂಬುದನ್ನು ಸಾಬೀತುಪಡಿಸಬೇಕು. ಹೊಸ ಪ್ರಮಾಣಿತ ನಿಯಮಗಳು ಸಿಸಿಟಿವಿ ಕ್ಯಾಮೆರಾಗಳು ಬಳಕೆದಾರರ ನೆಟ್‌ವರ್ಕ್‌ಗಳನ್ನು ಸೈಬರ್ ಬೆದರಿಕೆಗಳಿಗೆ ಒಳಗಾಗದಂತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಸಾಮಾನ್ಯವಾಗಿ ಸಿಸಿಟಿವಿ ಕ್ಯಾಮೆರಾಗಳು ಹೆಚ್ಚಿನ ಪ್ರಮಾಣದ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸುತ್ತವೆ. ವಿಮಾನ ನಿಲ್ದಾಣ, ಸರ್ಕಾರಿ ಕಟ್ಟಡ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ವಿಚಾರಣೆಗೆ ಇವುಗಳ ಅಳವಡಿಕೆ ಮೂಲಸೌಕರ್ಯವೆಂದೇ ಪರಿಗಣಿಸಲಾಗಿದೆ. ಆದರೆ ಇಂಟರ್‌ನೆಟ್ ಸಂಪರ್ಕಿತ ಸಿಸಿಟಿವಿ ಕ್ಯಾಮೆರಾಗಳು ಹಲವು ಅಪಾಯಗಳಿಗೂ ಕಾರಣವಾಗಬಲ್ಲದು. ಪ್ರಮುಖವಾಗಿ ಡೇಟಾ ಸೋರಿಕೆ ಅಥವಾ ಅನಧಿಕೃತ ರಿಮೋಟ್ ಪ್ರವೇಶ ಮತ್ತು ಸಂಭಾವ್ಯ ವಿದೇಶಿ ನಿಯಂತ್ರಣಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
2021ರಲ್ಲಿ , ಚೀನಾ ಕಂಪನಿಗಳ ಸುಮಾರು 10 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಅಳವಡಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆ ಬಳಿಕ ವಿದೇಶದಲ್ಲಿರುವ ಸರ್ವರ್‌ಗಳಿಗೆ ಡೇಟಾ ರವಾನೆಯಾಗುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.
ಅಪಾಯಕಾರಿ ಸಿಸಿಟಿವಿ ಕ್ಯಾಮೆರಾಗಳು
ಇರಾನ್ ದೇಶ ಇಸ್ರೇಲ್ ಮತ್ತು ಕತಾರ್ ಮೇಲೆ ನಡೆಸಿದ ದಾಳಿಯು ಸಿಸಿಟಿವಿ ಕ್ಯಾಮೆರಾಗಳು ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಉದಾಹರಣೆಯಾಗಿದೆ. ಏಕೆಂದರೆ, ಇರಾನ್-ಅಮೆರಿಕ ಯುದ್ಧದ ವೇಳೆ ಸಿಸಿಟಿವಿ ಕ್ಯಾಮೆರಾಗಳು ಹ್ಯಾಕ್ ಆದ ಬಗ್ಗೆ ಟೆಲ್ ಅವಿವ್ ಮೂಲದ ಭದ್ರತಾ ಸಂಸ್ಥೆ ಚೆಕ್ ಪಾಯಿಂಟ್ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಇರಾನ್ ಸೇನೆಯು ಅಮೆರಿಕ ಮತ್ತು ಇಸ್ರೇಲಿ ಬಾಂಬ್ ದಾಳಿಗಳಿಗೆ ಪ್ರತಿಯಾಗಿ ಇಸ್ರೇಲ್, ಕತಾರ್ ಮೇಲೆ ನಡೆಸಿದ ದಾಳಿಗಳಿಗೆ ಇದೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಗುರಿಯನ್ನು ಗುರುತಿಸಿದ್ದು ಪತ್ತೆಯಾಗಿದೆ ಎಂದು ಇಂಡಿಯಾ ಟುಡೆ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಇಸ್ರೇಲಿ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಬಹುತೇಕ ಎಲ್ಲಾ ಟ್ರಾಫಿಕ್ ಕ್ಯಾಮೆರಾಗಳ ಮೇಲೆ ಹಿಡಿತ ಸಾಧಿಸಿತ್ತು ಎನ್ನುತ್ತವೆ ಮೂಲಗಳು. ಅಲ್ಲದೆ ಗುಪ್ತಚರ ಸಂಸ್ಥೆಯ ಸಹಭಾಗಿತ್ವದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆಯ ನಿಕರ ದಾಳಿಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನೇ ಬಳಸಿಕೊಂಡಿದೆ ಎಂದು ಸೂಚಿಸುವ ವರದಿಗಳೂ ಇವೆ. ಹೀಗಾಗಿ ವಿದೇಶಿ ಕ್ಯಾಮೆರಾಗಳು ಭಾರತಕ್ಕೂ ಬೆದರಿಕೆಯನ್ನು ಉಂಟುಮಾಡಬಹುದು ಎನ್ನುವುದು ನಿರ್ಬಂಧದ ಹಿಂದಿನ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.
ಈ ನಿಯಮ ಹೊಸದಲ್ಲ
ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲಿನ ನಿರ್ಬಂಧವೇನೂ ಹೊಸ ನಿಯಮವಲ್ಲ ಅಥವಾ ಒಂದೇ ಸಲಕ್ಕೆ ಜಾರಿಗೆ ತಂದಿರುವುದೂ ಅಲ್ಲ. ಬದಲಾಗಿ 2024ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. 2 ವರ್ಷಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಅದು ಈ ವರ್ಷ ಮುಗಿದ ಕಾರಣ ಕಠಿಣ ನಿಯಮ ಜಾರಿಗೆ ಬಂದಿದೆ.
ಭಾರತೀಯ ಉತ್ಪಾದಕರಿಗೆ ಅನುಕೂಲ
ಕಡಿಮೆ ಬೆಲೆಯಲ್ಲಿ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳು ಮಾರುಕಟ್ಟೆಯನ್ನು ಆವರಿಸಿಕೊಂಡಿದ್ದವು ಎನ್ನುವುದು ಎಷ್ಟು ಸತ್ಯವೋ ಇತ್ತೀಚಿನ ದಿನಗಳಲ್ಲಿ ಭಾರತೀಯ ಕಂಪನಿಗಳು ಅಸ್ತಿತ್ವವನ್ನು ರೂಪಿಸಿಕೊಂಡು ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳುತ್ತಿವೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಚೀನಿ ಕ್ಯಾಮೆರಾಗಳ ಲಭ್ಯತೆ ಕಡಿಮೆಯಾದರೂ ಭಾರತದ ಮಾರುಕಟ್ಟೆಗೇನೂ ತೊಂದರೆಯಿಲ್ಲ.
ಭಾರತೀಯ ಸಿಸಿಟಿವಿ ಕ್ಯಾಮೆರಾ ತಯಾರಿಕಾ ಕಂಪನಿಗಳಾದ ಸಿಪಿ ಪ್ಲಸ್, ಕ್ಯುಬೊ, ಪ್ರಮಾ, ಮ್ಯಾಟ್ರಿಕ್ಸ್ ನಂತಹ ಬ್ರ್ಯಾಂಡ್‌ಗಳು ಪೂರೈಕೆ ಸರಪಳಿಗಳನ್ನು ವಿಸ್ತರಿಸಿಕೊಂಡಿವೆ. ಜತೆಗೆ ಸ್ಥಳೀಯ ಫರ್ಮ್‌ವೇರ್ ಅನ್ನು ಅಭಿವೃದ್ಧಿಪಡಿಸಿವೆ. ಸದ್ಯ ಮಾರುಕಟ್ಟೆಯಲ್ಲಿ ಶೇ 80ರಷ್ಟು ನಿಯಂತ್ರಣವನ್ನು ಭಾರತೀಯ ಉತ್ಪಾದಕರು ಹೊಂದಿದ್ದಾರೆ.
ಈಗಾಗಲೇ ಲಕ್ಷಗಟ್ಟಲೇ ಚೀನಿ ಸಿಸಿಟಿವಿ ಕ್ಯಾಮೆರಾಗಳನ್ನು ಭಾರತದಲ್ಲಿ ಅಳವಡಿಸಲಾಗಿದೆ. ಇವುಗಳ ಕಥೆ ಏನು ಎನ್ನುವುದಾದರೆ, ಸದ್ಯಕ್ಕೆ ಇವುಗಳನ್ನೇನು ಬದಲಾಯಿಸುವ ಅಗತ್ಯವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿ ಮತ್ತು ಪ್ರಮುಖ ಸ್ಥಳಗಳಲ್ಲಿ ಇವುಗಳನ್ನು ಬದಲಾಯಿಸುವ ಸಾಧ್ಯತೆಯಿದೆ.

