ಮುಂಬೈ: ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಫಲಿತಾಂಶಕ್ಕೂ ಮುನ್ನ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಇಂದು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ವಿಜಯ್ ಅವರು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಶಿರಡಿ ಸಾಯಿಬಾಬಾಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಜಯ್ ದೇವಾಲಯದ ಅಧಿಕಾರಿಗಳಿಂದ ಪ್ರಸಾದ ಸ್ವೀಕರಿಸಿದ್ದಾರೆ.
ಇನ್ನು ನಟನನ್ನು ನೋಡಲು ದೇವಸ್ಥಾನದ ಹೊರಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಶಿರಡಿಗೆ ಹೋಗುವ ಮುನ್ನ ವಿಜಯ್ ತಮಿಳುನಾಡಿನ ತಿರುಚೆಂಡೂರಿನ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನ ನಟ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಏಪ್ರಿಲ್ 23ರಂದು ಮತದಾನ ನಡೆದಿತ್ತು. ಸದ್ಯ ಚುನಾವಣಾ ಫಲಿತಾಂಶದ ಜೊತೆಗೆ, ತಾವು ನಟಿಸಿರುವ 'ಜನ ನಾಯಗನ್' ಸಿನಿಮಾ ಬಿಡುಗಡೆಗಾಗಿಯೂ ವಿಜಯ್ ಕಾಯುತ್ತಿದ್ದಾರೆ.

