HEALTH TIPS

ಇರಾನ್‌ ಸೇತುವೆ ಮೇಲೆ ಅಮೆರಿಕ ದಾಳಿ

ಟೆಹರಾನ್‌/ದುಬೈ: ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ನ ಕರಾಜ್‌ ನಗರದಲ್ಲಿರುವ ಅತಿ ಎತ್ತರದ ಸೇತುವೆ ಮೇಲೆ ಗುರುವಾರ ದಾಳಿ ನಡೆಸಿದ್ದರಿಂದ ಕುಪಿತಗೊಂಡಿರುವ ಇರಾನ್‌, ಪಶ್ಚಿಮ ಏಷ್ಯಾದ ನಾಲ್ಕು ದೇಶಗಳ ಎಂಟು ಪ್ರಮುಖ ಸೇತುವೆಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಪ್ರತೀಕಾರದ ಸುಳಿವು ನೀಡಿದೆ.

ಕೊಲ್ಲಿ ದೇಶಗಳು ಮತ್ತು ಜೋರ್ಡನ್‌ನಲ್ಲಿರುವ ಹಲವು ಪ್ರಮುಖ ಸೇತುವೆಗಳು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ನ (ಐಆರ್‌ಜಿಸಿ) ಸಂಭಾವ್ಯ ಗುರಿಗಳಾಗಿವೆ ಎಂದು ಇರಾನ್‌ನ ಸುದ್ದಿಸಂಸ್ಥೆ ಶುಕ್ರವಾರ ಹೇಳಿದೆ.

ಟೆಹರಾನ್‌ ಮತ್ತು ಪಶ್ಚಿಮದ ನಗರವಾದ ಕರಾಜ್‌ಗೆ ಸಂಪರ್ಕ ಕಲ್ಪಿಸುವ, ನಿರ್ಮಾಣ ಹಂತದಲ್ಲಿದ್ದ ಸುಮಾರು 136 ಮೀಟರ್‌ ಎತ್ತರದ ಬಿ-1 ಸೇತುವೆಯನ್ನು ಅಮೆರಿಕ, ಇಸ್ರೇಲ್‌ ವೈಮಾನಿಕ ದಾಳಿ ನಡೆಸಿ ಭಾಗಶಃ ನಾಶಪಡಿಸಿವೆ. ಸೇತುವೆ ಮೇಲೆ ಮತ್ತು ಸುತ್ತಮುತ್ತ ನಡೆದ ದಾಳಿಯಲ್ಲಿ ಎಂಟು ಜನರು ಮೃತಪಟ್ಟಿದ್ದು, 95 ಜನರು ಗಾಯಗೊಂಡಿದ್ದಾರೆ ಎಂದು ಅಲ್ಬೋರ್ಜ್‌ ಪ್ರಾಂತ್ಯದ ಉಪ ಗವರ್ನರ್‌ ಘೋದ್ರತೊಲ್ಲಾ ಸೈಫ್‌ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್ ಮೇಲೆ ದಾಳಿಯನ್ನು ತೀವ್ರಗೊಳಿಸಿ, ಅದನ್ನು ಶಿಲಾಯುಗದ ಸ್ಥಿತಿಗೆ ಕಳುಹಿಸುವುದಾಗಿ ಪುನರುಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಟೆಹರಾನ್‌ನ ನೈರುತ್ಯ ಭಾಗದಲ್ಲಿ 35 ಕಿ.ಮೀ ದೂರದಲ್ಲಿರುವ ಈ ಸೇತುವೆಯ ಪ್ರಮುಖ ಭಾಗಗಳು ಕುಸಿದು ಬೀಳುತ್ತಿರುವುದನ್ನು ತೋರಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಅಲ್ಲದೆ, ಈ ಸೇತುವೆಯಿಂದ ಹೊಗೆ ಬರುತ್ತಿರುವ ದೃಶ್ಯಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಪೋಸ್ಟ್‌ ಮಾಡಿದ್ದು, ಯುದ್ಧ ಕೊನೆಗೊಳಿಸಲು ಇರಾನ್‌ ಮಾತುಕತೆಗೆ ಬರದಿದ್ದರೆ ಇನ್ನಷ್ಟು ವಿನಾಶ ಸಂಭವಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

'ಇರಾನ್‌ನ ಅತಿದೊಡ್ಡ ಸೇತುವೆ ಉರುಳಿದೆ, ಅದನ್ನು ಮತ್ತೆಂದೂ ಬಳಸಲಾಗದು. ಮುಂದೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ. ಇನ್ನಷ್ಟು ಸೇತುವೆಗಳು, ವಿದ್ಯುತ್‌ ಸ್ಥಾವರಗಳು ಗುರಿಯಾಗಲಿವೆ. ಹೀಗಾಗಿ ಮತ್ತಷ್ಟು ತಡವಾಗುವ ಮೊದಲು ಇರಾನ್‌ ಒಪ್ಪಂದಕ್ಕೆ ಬರುವುದು ಸೂಕ್ತ. ಅದಕ್ಕೆ ಇದು ಸೂಕ್ತ ಸಮಯ' ಎಂದು ಟ್ರಂಪ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

'8 ಸೇತುವೆಗಳನ್ನೂ ಗುರಿಯಾಗಿಸುತ್ತೇವೆ':

ಅಮೆರಿಕ, ಇಸ್ರೇಲ್‌ ದಾಳಿಗೆ ಪ್ರತೀಕಾರವಾಗಿ ಕುವೈತ್‌ನ ಶೇಖ್‌ ಜಾಬರ್‌ ಅಲ್‌-ಅಹ್ಮದ್‌ ಅಲ್‌-ಸಬಾ ಸಮುದ್ರ ಸೇತುವೆ; ಯುಎಇ ಅಲ್ಲಿರುವ ಶೇಖ್‌ ಜಾಯೆದ್‌ ಸೇತುವೆ, ಅಲ್‌ ಮಕ್ತಾ ಸೇತುವೆ ಮತ್ತು ಶೇಖ್‌ ಖಲೀಫಾ ಸೇತುವೆ; ಸೌದಿ ಅರೇಬಿಯಾವನ್ನು ಬಹರೇನ್‌ಗೆ ಸಂಪರ್ಕಿಸುವ ಕಿಂಗ್ ಫಹದ್‌ ಕಾಸ್‌ವೇ; ಜೋರ್ಡಾನ್‌ನಲ್ಲಿರುವ ಕಿಂಗ್ ಹುಸೇನ್‌ ಸೇತುವೆ, ಡಾಮಿಯಾ ಸೇತುವೆ ಮತ್ತು ಅಬ್ದೌನ್‌ ಸೇತುವೆಗಳನ್ನು ಗುರಿಯಾಗಿಸಲಿದ್ದೇವೆ ಎಂದು ಇರಾನ್‌ ಹೇಳಿದೆ.

'ಅಪೂರ್ಣ ಸೇತುವೆಗಳು ಸೇರಿದಂತೆ ನಾಗರಿಕರ ಸೌಲಭ್ಯಗಳನ್ನು ಹೊಡೆದು, ಇರಾನಿಯರನ್ನು ಶರಣಾಗುವಂತೆ ಮಾಡುತ್ತೇವೆ ಎಂಬುದೆಲ್ಲ ಅವರ ಭ್ರಮೆ. ಇದು ಗೊಂದಲದಲ್ಲಿರುವ ಶತ್ರುವಿನ ಸೋಲು ಮತ್ತು ನೈತಿಕ ಕುಸಿತವನ್ನು ತೋರಿಸುತ್ತದೆ' ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕುವೈತ್‌ ತೈಲ ಘಟಕದ ಮೇಲೆ ದಾಳಿ:

ಅಮೆರಿಕಕ್ಕೆ ನೆರವು ನೀಡುತ್ತಿರುವ ಆರೋಪದ ಮೇಲೆ ಪಶ್ಚಿಮ ಏಷ್ಯಾ ಮತ್ತು ಕೊಲ್ಲಿಯಲ್ಲಿನ ಅದರ ಮಿತ್ರ ದೇಶಗಳ ಮೇಲೆ ಇರಾನ್‌ ಶುಕ್ರವಾರ ದಾಳಿಯನ್ನು ತೀವ್ರಗೊಳಿಸಿದ್ದು, ಕುವೈತ್‌ನ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್‌ಗಳ ದಾಳಿ ನಡೆಸಿದೆ.

ಕುವೈತ್‌ನ ಮಿನಾ ಅಲ್‌- ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಶುಕ್ರವಾರ ಮುಂಜಾನೆ ಇರಾನ್‌ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಯಾವುದೇ ಸಾವು, ನೋವಿನ ವರದಿಯಾಗಿಲ್ಲ.

ಇರಾನ್‌ ಪ್ರತಿಪಾದನೆ ಅಲ್ಲಗಳೆದ ಅಮೆರಿಕ:

ಅಮೆರಿಕದ ಬಲಿಷ್ಠವಾದ ಎರಡು ಎಫ್‌-35 ಸ್ಟೆಲ್ತ್‌ ಫೈಟರ್‌ ಜೆಟ್‌ಗಳನ್ನು ಇರಾನ್‌ನ ಐಆರ್‌ಜಿಸಿ 24 ಗಂಟೆಗಳಲ್ಲಿ ಹೊಡೆದುರುಳಿಸಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ವಿಮಾನದ ಅವಶೇಷಗಳ ಚಿತ್ರಗಳನ್ನು ತಸ್ನಿಮ್‌ ಸುದ್ದಿಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಆದರೆ ಇದನ್ನು ಅಮೆರಿಕ ನಿರಾಕರಿಸಿದೆ.

'ನೈರುತ್ಯ ಇರಾನ್‌ನಲ್ಲಿ ಅಮೆರಿಕದ ಯುದ್ಧ ವಿಮಾನದ ಪೈಲಟ್‌ ಒಬ್ಬರು ವಿಮಾನದಿಂದ ಜಿಗಿದಿದ್ದಾರೆ. ಅವರನ್ನು ಸೆರೆ ಹಿಡಿದು ಪೊಲೀಸ್‌ ಅಥವಾ ಸೇನಾ ಪಡೆಗಳಿಗೆ ಜೀವಂತವಾಗಿ ಒಪ್ಪಿಸಿದರೆ, ಅಮೂಲ್ಯವಾದ ಬಹುಮಾನ ದೊರೆಯುತ್ತದೆ' ಎಂದು ಇರಾನ್‌ ಸ್ಥಳೀಯ ಮಾಧ್ಯಮದ ನಿರೂಪಕರೊಬ್ಬರು ಪ್ರಕಟಿಸಿದ್ದಾರೆ.

ಆದರೆ ಈ ಕುರಿತ ವರದಿಗಳನ್ನು ತಳ್ಳಿಹಾಕಿರುವ ಅಮೆರಿಕದ ಸೆಂಟ್ರಲ್‌ ಕಮಾಂಡ್‌, 'ಇರಾನ್‌ನ ಐಆರ್‌ಜಿಸಿ ಈ ರೀತಿ ಅರ್ಧ ಡಜನ್‌ಗೂ ಹೆಚ್ಚು ಸುಳ್ಳು ಹೇಳಿಕೆಗಳನ್ನು ನೀಡಿದೆ' ಎಂದಿದೆ.

ಭದ್ರತಾ ಮಂಡಳಿಯಲ್ಲಿ ಚರ್ಚೆ

ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸುವ ಮತ್ತು ಅಲ್ಲಿ ಸುರಕ್ಷಿತ ಸಂಚಾರವನ್ನು ಖಾತರಿಪಡಿಸಿಕೊಳ್ಳುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶನಿವಾರ ಚರ್ಚೆ ನಡೆಯಲಿದೆ. ಜಲಸಂಧಿ ರಕ್ಷಣೆಗೆ ಅಗತ್ಯವಿರುವ ಎಲ್ಲ ವಿಧಾನಗಳನ್ನು ಬಳಸುವ ಕುರಿತು ಬಹರೇನ್‌ ಸಲ್ಲಿಸಿರುವ ಕರಡು ನಿರ್ಣಯ ಪ್ರಸ್ತಾವದ ಕುರಿತು ಮತ ಚಲಾವಣೆ ಆಗುವ ಸಾಧ್ಯತೆಯಿದೆ. ಆದರೆ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ರಷ್ಯಾ ಚೀನಾ ಮತ್ತು ಫ್ರಾನ್ಸ್‌ ದೇಶಗಳು ಬಲಪ್ರಯೋಗವನ್ನು ಅನುಮೋದಿಸಲು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ಕೊರಿಯಾ ಫ್ರಾನ್ಸ್‌ ಯತ್ನ: ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಪ್ರಯತ್ನಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಹೇಳಿದ್ದಾರೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ಸಭೆಯ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ. ಹೊರ್ಮುಜ್‌ ಜಲಸಂಧಿಯನ್ನು ಸಹಕಾರ ಮತ್ತು ಸಮನ್ವಯ ವಿಧಾನದ ಮೂಲಕ ತೆರವುಗೊಳಿಸಲು ಯತ್ನಿಸುವುದಾಗಿ ಅವರು ಹೇಳಿದ್ದಾರೆ. 'ಸೇನಾ ಕಾರ್ಯಾಚರಣೆ ಮೂಲಕ ಜಲಸಂಧಿಯನ್ನು ವಶಕ್ಕೆ ಪಡೆಯವುದು ಸೂಕ್ತವಲ್ಲ. ಅದರಿಂದ ಮುಂದೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಈ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ ಇರಾನ್‌ನ ರೆವೆಲ್ಯೂಷನರಿ ಗಾರ್ಡ್‌ ಕಡೆಯಿಂದ ಬೆದರಿಕೆಗಳು ಬರಬಹುದು. ಹೀಗಾಗಿ ಇರಾನ್‌ ಜತೆಗೆ ಸಮನ್ವಯ ಸಾಧಿಸುವ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ' ಎಂದು ಮ್ಯಾಕ್ರನ್‌ ಅಭಿಪ್ರಾಯಪಟ್ಟಿದ್ದಾರೆ.

ದಿನದ ಬೆಳವಣಿಗೆಗಳು

* ಹೊರ್ಮುಜ್‌ ಜಲಸಂಧಿಯ ಮೇಲ್ವಿಚಾರಣೆ ಮಾಡಲು ಒಮನ್‌ ಜತೆ ಪ್ರಸ್ತಾವನೆ ರೂಪಿಸುತ್ತಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಆದರೆ ಈ ಕುರಿತು ಒಮನ್‌ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ

* ಜಲಸಂಧಿಯನ್ನು ಮುಕ್ತಗೊಳಿಸುವ ಮೂಲಕ ಇರಾನ್‌ ಈಗ ಕದನ ವಿರಾಮ ಒಪ್ಪಂದಕ್ಕೆ ಮುಂದಾಗಬೇಕು ಎಂದು ಅಲ್ಲಿನ ಮಾಜಿ ರಾಜತಾಂತ್ರಿಕ ಅಧಿಕಾರಿ ಮೊಹಮ್ಮದ್‌ ಜಾವದ್‌ ಜರೀಫ್‌ ತಿಳಿಸಿದ್ದಾರೆ

* ಇರಾನ್‌ನ ಶೇ 70ರಷ್ಟು ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಇಸ್ರೇಲ್‌ ನಾಶ ಮಾಡಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪ್ರತಿಪಾದಿಸಿದ್ದಾರೆ

* ಸಾವು ನೋವು: ಯುದ್ಧ ಆರಂಭವಾದಾಗಿನಿಂದ ಇರಾನ್‌ನಲ್ಲಿ 1900 ಇಸ್ರೇಲ್‌ನಲ್ಲಿ 19 ಕೊಲ್ಲಿ ದೇಶಗಳಲ್ಲಿ 24 ಜನರು ಮೃತಪಟ್ಟಿದ್ದಾರೆ. ಅಮೆರಿಕದ 13 ಸೈನಿಕರು ಮೃತಪಟ್ಟಿದ್ದಾರೆ. ಅಲ್ಲದೆ ಲೆಬನಾನ್‌ನಲ್ಲಿ 1300ಕ್ಕೂ ಹೆಚ್ಚು ಜನರು ಯುದ್ಧದಲ್ಲಿ ಮೃತಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries