ಬಾರಾಮತಿ: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಜೀವಹಾನಿಗೆ ಕಾರಣವಾದ ವಿಮಾನ ದುರಂತದ ಹಿಂದೆ ಸಂಶಯಾಸ್ಪದ ಅಂಶಗಳಿರುವುದಾಗಿ ಹೇಳಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್ ಗುಂಪು) ಶಾಸಕ ರೋಹಿತ್ ಪವಾರ್, ನಾಸಿಕ್ ಮೂಲದ ಸ್ವಘೋಷಿತ ದೇವಮಾನವ ಅಶೋಕ್ ಖಾರಟ್ ನ ಪಾತ್ರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗಗೊಳ್ಳಲು ಅಪರಾಧ ತನಿಖಾ ದಳ (ಸಿಐಡಿ) ಮೂಲಕ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪುಣೆಯ ಸಿಐಡಿ ಕಚೇರಿಗೆ ಭೇಟಿ ನೀಡಿ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾರಾಮತಿಯ ಒಬ್ಬ ಸಣ್ಣ ರಾಜಕೀಯ ನಾಯಕನ ಮೂಲಕ ಅಜಿತ್ ಪವಾರ್ ಅವರ ನಿವಾಸದ ಹೊರಭಾಗದಲ್ಲಿ ಕೆಲವು ಮಾಂತ್ರಿಕ ವಿಧಿವಿಧಾನಗಳು ನಡೆದಿದೆ ಎಂದು ಆರೋಪಿಸಿದರು.
"ಅಜಿತ್ ದಾದಾ ಅವರ ಮನೆಯ ಸಮೀಪ ಮೇಕೆಯನ್ನು ನೇತಾಡಿಸಿರುವುದು ಕಂಡುಬಂದಿತ್ತು. ಪವಾರ್ ಕುಟುಂಬದ ಮೇಲೆ ಶೀಘ್ರದಲ್ಲೇ ದಾಳಿ ಸಂಭವಿಸಬಹುದು ಎಂದು ಖಾರಟ್ ಒಬ್ಬ ರೈತನಿಗೆ ಮುಂಚಿತವಾಗಿ ಹೇಳಿದ್ದಾನೆ. ಬಾರಾಮತಿಯ ಒಬ್ಬ ಸಣ್ಣ ರಾಜಕೀಯ ನಾಯಕ ಸಘೋಷಿತ ದೇವಮಾನವ ಅಶೋಕ್ ಖಾರಟ್ ನನ್ನು ಧಾರ್ಮಿಕ ಕಾರ್ಯಗಳಿಗಾಗಿ ಭೇಟಿ ಮಾಡುತ್ತಿದ್ದನು. ಜೊತೆಗೆ ಅಜಿತ್ ದಾದಾ ಅವರ ನಿಕಟ ವಲಯದ ಕೆಲವರೊಂದಿಗೆ ಅವನ ಸಂಪರ್ಕವಿತ್ತು," ಎಂದು ರೋಹಿತ್ ಪವಾರ್ ಹೇಳಿದರು.
ಜನವರಿ 27 ಮತ್ತು 28ರಂದು ಅಶೋಕ್ ಖಾರಟ್ ನ ಬ್ಯಾಂಕ್ ಖಾತೆಯಲ್ಲಿ ಏಕಾಏಕಿ ವಹಿವಾಟು ಹೆಚ್ಚಳ ಕಂಡುಬಂದಿರುವುದನ್ನು ಅವರು ಅನುಮಾನಾಸ್ಪದವೆಂದು ವಿವರಿಸಿದರು. "ಮಾರ್ಚ್ ತಿಂಗಳಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಹಾಗೂ ವಂಚನೆ ಪ್ರಕರಣಗಳಲ್ಲಿ ಖಾರಟ್ ಬಂಧಿತರಾಗಿದ್ದಾನೆ. ಈ ಹಿನ್ನಲೆಯಲ್ಲಿ ವಿಮಾನ ದುರಂತದೊಂದಿಗೆ ಆತನ ಪಾತ್ರವಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ," ಎಂದರು.
"ಖಾರಟ್ ಬ್ಲ್ಯಾಕ್‌ಮೇಲ್ ಉದ್ದೇಶಕ್ಕಾಗಿ ಕೆಲವು ವೀಡಿಯೊಗಳನ್ನು ಸಂಗ್ರಹಿಸಿದ್ದಾನೆ. ಆದರೆ ಹೊರಬಂದಿರುವುದು ಸಾಮಾನ್ಯ ಮಹಿಳೆಯರ ದೃಶ್ಯ ತುಣುಕುಗಳು ಮಾತ್ರ," ಎಂಬ ಆರೋಪವನ್ನೂ ಅವರು ಮಾಡಿದರು.
ಸಿಐಡಿ ತನಿಖೆಯ ಪ್ರಗತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಪವಾರ್, "ಮೂರು ತಿಂಗಳು ಕಳೆದರೂ ಅಪಘಾತದ ನಿಜಸ್ವರೂಪ ಇನ್ನೂ ಬಹಿರಂಗವಾಗಿಲ್ಲ. ನಾವು ಮೊದಲ ಬಾರಿ ಬಂದಾಗ ಎಡಿಜಿ ಸುನಿಲ್ ರಮಾನಂದ್ ಹಾಜರಿದ್ದರು. ಎರಡನೇ ಬಾರಿ ಕೆಲ ಅಧಿಕಾರಿಗಳು ಇದ್ದರು. ಆದರೆ ಇಂದು ಪ್ರಮುಖ ಅಧಿಕಾರಿಗಳು ಕ್ರಿಕೆಟ್ ಪಂದ್ಯಕ್ಕಾಗಿ ಮುಂಬೈಗೆ ತೆರಳಿರುವುದರಿಂದ ಕಚೇರಿಯಲ್ಲಿ ಹಾಜರಿರಲಿಲ್ಲ," ಎಂದು ಟೀಕಿಸಿದರು.
ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ವಹಿಸುತ್ತಿದ್ದ ಲಿಯರ್‌ಜೆಟ್ 45 ವಿಮಾನವು ಜನವರಿ 28ರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ವೇಳೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಅಜಿತ್ ಪವಾರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
ಘಟನೆಯ ಬಳಿಕ ರೋಹಿತ್ ಪವಾರ್ ಅವರು ಬೆಂಗಳೂರಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 173(1) ಅಡಿಯಲ್ಲಿ 'ಶೂನ್ಯ ಎಫ್‌ಐಆರ್' ದಾಖಲಿಸಿದ್ದರು.
"ಸರಿಯಾದ ತನಿಖೆ ನಡೆಸುವ ಬದಲು ಅಧಿಕಾರಿಗಳು ವಿಚಾರಣೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಮಾಹಿತಿಯನ್ನು ಪಡೆದಿರುವುದಾಗಿ ತಿಳಿಸಿದ ಅವರು, "ವಿಮಾನಕ್ಕೆ ಸಂಬಂಧಿಸಿದ ತಾಂತ್ರಿಕ ದಾಖಲೆಗಳು ಎಫ್‌ಡಿಎ ವ್ಯವಸ್ಥೆಯಲ್ಲಿ ಲಭ್ಯವಿವೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೂ ಭಾಗವಹಿಸಿದೆ. ಮೊದಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಸುಟ್ಟುಹೋಗಿದೆ ಎಂದು ಹೇಳಲಾಗಿತ್ತು. ಈಗ ಎಲ್ಲಾ ಡೇಟಾವನ್ನು ಡೌನ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯನ್ನು ಸಿಐಡಿಯೇ ನಡೆಸಬೇಕು," ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಡಿಜಿ ಸುನಿಲ್ ರಮಾನಂದ್, ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಘಾತ ಸಾವಿನ ಪ್ರಕರಣವನ್ನು ಸಿಐಡಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ದಾಖಲಾಗಿದ್ದ ಶೂನ್ಯ ಎಫ್‌ಐಆರ್ ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 180 ಅಡಿಯಲ್ಲಿ ಹೇಳಿಕೆಯಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಇನ್ನೊಂದೆಡೆ, ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಪ್ರತ್ಯೇಕವಾಗಿ ತನಿಖೆ ನಡೆಸಿ, ಫೆಬ್ರವರಿ 28ರಂದು ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

