ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ನೂರನೇ ವರ್ಷಾಚರಣೆಯ ಕಾರ್ಯಕ್ರಮವನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಸುವುದನ್ನು ವಿರೋಧಿಸಿ ದೆಹಲಿಯ 'ಜಾಮಿಯಾ ಮಿಲಿಯ ಇಸ್ಲಾಮಿಯಾ' ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂದು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯ ಪಡೆಯ ಭಾರಿ ಭದ್ರತೆಯ ನಡುವೆಯೂ ವಿದ್ಯಾರ್ಥಿಗಳು ಪ್ರತಿಭಟನೆ ತೋರಿದ್ದಾರೆ.
'ಜಾಮಿಯಾ ವಿಶ್ವವಿದ್ಯಾಲಯ ನಮ್ಮದು, ನಿಮ್ಮ ಶಾಖೆಯಲ್ಲ', 'ನಮ್ಮ ಕ್ಯಾಂಪಸ್ ಕೇಸರೀಕರಣಕ್ಕೆ ವಿರೋಧ' ಎಂದು ಬರೆದ ಭಿತ್ತಿಪತ್ರವನ್ನು ಪ್ರದರ್ಶಿಸಿ 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಮೊಳಗಿಸಿದ್ದಾರೆ.
'ವಿಶ್ವವಿದ್ಯಾಲಯದ ಹಲವಾರು ಪ್ರವೇಶದ್ವಾರಗಳಲ್ಲಿ ಒಂದರ ಮೂಲಕ ಆರ್‌ಎಸ್‌ಎಸ್ ತನ್ನ ಮುಖ್ಯ ಅತಿಥಿಯನ್ನು ಕರೆತರಲು ಪ್ರಯತ್ನಿಸುತ್ತಿದೆ. ಆದರೆ ನಾವು ಸಭಾಗಂಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದೇವೆ' ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ತಾಪಮಾನ ಹೆಚ್ಚಿದ್ದರೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬಿಸಿಲನ್ನು ಸಹಿಸಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದೆಹಲಿ ವಿಶ್ವಿದ್ಯಾಲಯದ ಕಾಲೇಜುಗಳು ಆರ್‌ಎಸ್‌ಎಸ್ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕಾರಣ ಜಾಮಿಯಾದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಇದಕ್ಕೆ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿದೆ.

