ಕಾಸರಗೋಡು: ಹನ್ನೊಂದರ ಹರೆಯದ ಬಾಲಕಿಯೊಬ್ಬಳು ತನ್ನ ಹರಳುಹುರಿದ ಮಾತುಗಳಿಂದ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಾಗಿಸುವಂತೆ ಮಾಡುವ ಕಾರ್ಯ ಕಾಸರಗೋಡು ನಗರದ ಜನತೆಯಲ್ಲಿ ಕೌತುಕ ಮೂಡಿಸಿತು.
ಬಂಟ್ವಾಳ ತಾಲೂಕಿನ ಸನ್ನಿಧಿ ಕಶೆಕೋಡಿ ಈ ವಿಶಿಷ್ಟ ಜಾಗೃತಿ ಅಭಿಯಾನದಲ್ಲಿ ತನ್ನನ್ನು ತೊಡಗಿಸಿಕೊಂಡ ಬಾಲಕಿ. ಎಲ್ಲಾ ಕಡೆ ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ, ಸನ್ನಿಧಿ ತನ್ನ ಮೊನಚಾದ ಮತುಗಳಿಂದ ಹದಿನೆಂಟು ವರ್ಷ ದಾಟಿದವರು ಯಾಕೆ ಮತ ಚಲಾಯಿಸಬೇಕು, ಮತದಾನದ ಮಹತ್ವ ಏನು ಎಂಬ ಬಗ್ಗೆ ಮತದಾರರಿಗೆ ಮನೋಜ್ಞವಾಗಿ ವಿವರಿಸುವ ಪ್ರಯತ್ನ ನಡೆಸುತ್ತಿದ್ದಳು.
ಚುನಾವಣೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಲು ಈ ಪುಟ್ಟ ಪೋರಿ, ಮಂಜೇಶ್ವರ, ಕಾಸರಗೋಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಂದೆ ಲೋಕೇಶ್ ಗೌಡ ಕಶೆಕೋಡಿ ಹಾಗೂ ಶೀಲಾವತಿ ಜತೆ ಸಂಚರಿಸುತ್ತಾ ಅಭಿಯಾನ ನಡೆಸುತ್ತಿದ್ದಾರೆ. ಕನ್ನಡ, ಮಲಯಾಳ, ತುಳು, ಆಂಗ್ಲ, ಹಿಂದಿ, ಕೊಂಕಣಿ ಭಾಷೆಗಳಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸುತ್ತಿರುವ ಸನ್ನಿಧಿ, ದೆಹಲಿ, ಗೋವಾ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳ ಚುನಾವಣೆಗಳಿಗೂ ಇದೇ ರೀತಿಯ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಪರಶಂಸೆಗೆ ಪಾತ್ರರಾಗಿದ್ದಾಳೆ. ಸೋಮವಾರ ಕಾಸರಗೋಡಿಗೆ ಭೇಟಿ ನೀಡಿದ್ದ ಸನ್ನಿಧಿ, ನಗರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರನ್ನೂ ಅವರ ಚೇಂಬರ್‍ನಲ್ಲಿ ಭೇಟಿ ಮಾಡಿ ತನ್ನ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದಳು. ಸನ್ನಿಧಿ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಸನ್ನಿಧಿ ಕೇರಳಂನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲೂ ಮತದಾನದ ಜಾಗೃತಿ ಅಭಿಯಾನ ನಡೆಸುವ ಮೂಲಕ ಗಮನಸೆಳೆದಿದ್ದಳು.



