ಗುರುಗ್ರಾಮ: ನಕಲಿ ಮೌಂಜೆರೊ (ಟಿರ್‌ಝೆಪೆಟೈಡ್) ಚುಚ್ಚುಮದ್ದುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಇಲ್ಲಿ ಭೇದಿಸಿರುವ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 62ರಲ್ಲಿಯ ವಸತಿ ಸಂಕೀರ್ಣವೊಂದರ ಫ್ಲ್ಯಾಟ್‌ನಲ್ಲಿ ಈ ನಕಲಿ ತಯಾರಿಕೆ ಘಟಕವು ಕಾರ್ಯ ನಿರ್ವಹಿಸುತ್ತಿತು.
ಸೋಮವಾರ ಅಲ್ಲಿಗೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮುಖ್ಯ
ಆರೋಪಿ ಗುರುಗ್ರಾಮ ನಿವಾಸಿ ಅವಿ ಶರ್ಮಾ ಮತ್ತು ಡೆಲಿವರಿ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ಮುಝಮಿಲ್ ಎನ್ನುವವರನ್ನು ಬಂಧಿಸಿದ್ದಾರೆ ಎಂದು ಔಷಧಿ ನಿಯಂತ್ರಣಾಧಿಕಾರಿ ಅಮನದೀಪ್ ಚೌಹಾಣ ತಿಳಿಸಿದರು.
ಆರೋಪಿಗಳು ಚೀನಾದಿಂದ ಕಚ್ಚಾ ಔಷಧಿಗಳನ್ನು ಆಮದು ಮಾಡಿಕೊಂಡು ನಕಲಿ ಮೌಂಜೆರೊ ಚುಚ್ಚುಮದ್ದುಗಳನ್ನು ತಯಾರಿಸುತ್ತಿದ್ದರು. ಬಿ2ಬಿ ಪೋರ್ಟಲ್ ಇಂಡಿಯಾ ಮಾರ್ಟ್ ಮೂಲಕ ಈ ಅಕ್ರಮ ಚುಚ್ಚುಮದ್ದುಗಳನ್ನು ಪೂರೈಸುತ್ತಿದ್ದರು ಎಂದರು.
ಮೌಂಜೆರೊ ಟೈಪ್ 2 ಮಧುಮೇಹ ರೋಗಿಗಳಿಗೆ ವಾರಕ್ಕೊಮ್ಮೆ ನೀಡುವ ಇಂಜೆಕ್ಷನ್ ಆಗಿದ್ದು,ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ನಿಯಂತ್ರಿಸುತ್ತದೆ ಮತ್ತು ಶರೀರದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ.
ಸೋಮವಾರ ದಾಳಿ ತಂಡವು ಡಿಎಲ್‌ಎಫ್ ಫೇಸ್ 4ರಲ್ಲಿ ವಾಹನವೊಂದರಿಂದ 70 ಲಕ್ಷ ರೂ.ಮೌಲ್ಯದ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿತ್ತು. ತನಿಖೆಯ ಭಾಗವಾಗಿ ಸೆಕ್ಟರ್ 62ರಲ್ಲಿಯ ಫ್ಲ್ಯಾಟ್ ಮೇಲೆ ದಾಳಿ ನಡೆಸಿತ್ತು. ಇಲ್ಲಿ ಕಚ್ಚಾ ಔಷಧಿಗಳಿಗೆ ನೀರು ಬೆರೆಸಿ ಚುಚ್ಚುಮದ್ದುಗಳನ್ನು ತಯಾರಿಸಲಾಗುತ್ತಿತ್ತು. ನಂತರ ಎಲ್ಲ ಪ್ಯಾಕೇಜಿಂಗ್,ಬಾರ್‌ಕೋಡಿಂಗ್ ಅಂಟಿಸುವಿಕೆ ಮತ್ತು ಲೇಬಲಿಂಗ್‌ನ್ನು ಅದೇ ಫ್ಲ್ಯಾಟ್‌ನಲ್ಲಿ ಮಾಡಲಾಗುತ್ತಿತ್ತು. ತಂಡವು ಪ್ಯಾಕೇಜಿಂಗ್ ಯಂತ್ರಗಳನ್ನು ಸಹ ವಶ ಪಡಿಸಿಕೊಂಡಿದೆ ಎಂದು ಚೌಹಾಣ ತಿಳಿಸಿದರು.
ಮುಝಮಿಲ್‌ನನ್ನು ಮೊದಲು ಬಂಧಿಸಿದ ತಂಡವು,ಆತ ನೀಡಿದ ಮಾಹಿತಿ ಮೇರೆಗೆ ನಂತರ ಅವಿ ಶರ್ಮಾನನ್ನು ವಶಕ್ಕೆ ತೆಗೆದುಕೊಂಡಿತ್ತು.
ನಕಲಿ ಚುಚ್ಚುಮದ್ದಿನ ಕುರಿತು ದೇಶಾದ್ಯಂತ ಎಚ್ಚರಿಕೆಯನ್ನು ನೀಡಲಾಗಿದೆ. ನಕಲಿ ಚುಚ್ಚುಮದ್ದುಗಳನ್ನು ಎಲ್ಲಿಗೆ ಪೂರೈಸಲಾಗುತ್ತಿತ್ತು ಮತ್ತು ಈ ಜಾಲದಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಎನ್ನುವುದನ್ನು ಕಂಡುಕೊಳ್ಳಲು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಚೌಹಾಣ ತಿಳಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಔಷಧಿಗಿರುವ ಹೆಚ್ಚಿನ ಬೇಡಿಕೆಯ ಲಾಭ ಪಡೆದುಕೊಳ್ಳಲು ನಕಲಿ ಇಂಜೆಕ್ಷನ್‌ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಔಷಧಿ ವ್ಯಾಪಾರಿಯೋರ್ವರು ತಿಳಿಸಿದರು.

