HEALTH TIPS

ಮಾಲಿನ್ಯ ಮುಕ್ತದತ್ತ ದೆಹಲಿ ಹೆಜ್ಜೆ: ಹಂತ ಹಂತವಾಗಿ ಪೆಟ್ರೋಲ್ ವಾಹನ ನೋಂದಣಿ ರದ್ದು

 ನವದೆಹಲಿ: ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾಗಿರುವ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.


ಹಂತ-ಹಂತವಾಗಿ ಪೆಟ್ರೋಲ್ ವಾಹನಗಳು ರಸ್ತೆಗಿಳಿಯುವುದನ್ನು ತಪ್ಪಿಸಲು ನೂತನ 'ಎಲೆಕ್ಟ್ರಿಕ್ ವಾಹನ (ಇ.ವಿ) ನೀತಿ 2026-2030' ಕರಡನ್ನು ಬಿಡುಗಡೆ ಮಾಡಿದೆ.

ಇದರ ಪ್ರಕಾರ 2028ರಿಂದ ದೆಹಲಿಯಲ್ಲಿ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉದ್ದೇಶಿಸಲಾಗಿದೆ.

ಎಲೆಕ್ಟ್ರಿಕ್ ವಾಹನ ನೀತಿಯ ಕರಡನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರು ಮತ್ತು ತಜ್ಞರ ಪ್ರತಿಕ್ರಿಯೆಗಾಗಿ 30 ದಿನಗಳ ಅವಕಾಶ ನೀಡಲಾಗಿದೆ.

ಪೆಟ್ರೋಲ್ ವಾಹನಗಳ ಮೇಲೆ ಕಾಲಮಿತಿಯಲ್ಲಿ ನಿರ್ಬಂಧ, ಕಟ್ಟುನಿಟ್ಟಾದ ನಿಯಮಗಳು, ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳನ್ನು ವಿಸ್ತರಿಸುವ ಮೂಲಕ ದೆಹಲಿಯನ್ನು 'ಎಲೆಕ್ಟ್ರಿಕ್ ಮೊಬಿಲಿಟಿ'ಯತ್ತ ಕೊಂಡೊಯ್ಯಲು ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ವಾಹನಗಳ ಹೊಗೆ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.

ಪೆಟ್ರೋಲ್ ದ್ವಿಚಕ್ರ ವಾಹನ, ಆಟೊಗಳಿಗೆ ಗಡುವು...

2027ರ ಜನವರಿ ತಿಂಗಳಿಂದ ದೆಹಲಿಯಲ್ಲಿ ಹೊಸದಾಗಿ ನೋಂದಣಿಯಾಗುವ ಎಲ್ಲಾ ತ್ರಿಚಕ್ರ ವಾಹನಗಳು ಕೇವಲ ಎಲೆಕ್ಟ್ರಿಕ್ ಆಗಿರಬೇಕು. ಹಾಗೂ 2028ರ ಏಪ್ರಿಲ್ 1ರಿಂದ ಎಲೆಕ್ಟ್ರಿಕ್ ಮಾದರಿ ದ್ವಿಚಕ್ರ ವಾಹನಗಳ ನೋಂದಣಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕರಡು ನೀತಿಯಲ್ಲಿ ತಿಳಿಸಲಾಗಿದೆ.

ವಾಣಿಜ್ಯ ಬಳಕೆಯ ವಾಹನಗಳಿಗೂ ವಿವಿಧ ಹಂತಗಳಲ್ಲಿ ಎಲೆಕ್ಟ್ರಿಕ್ ಪರಿವರ್ತನೆ ಅಥವಾ ಹೊಸ ಖರೀದಿ/ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯಮ ಮತ್ತು ಗ್ರಾಹಕರು ಇದಕ್ಕೆ ಹೊಂದಿಕೊಳ್ಳಲು ಸಮಯ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲಾ ಬಸ್‌, ಸರ್ಕಾರಿ ವಾಹನಗಳೂ ಎಲೆಕ್ಟ್ರಿಕ್...

ಕರಡು ನೀತಿಯಲ್ಲಿ ಪ್ರಸ್ತಾಪಿಸಿರುವಂತೆ ಶಾಲಾ ಬಸ್‌ ಅಥವಾ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಇ.ವಿ ನೀತಿ ಆರಂಭವಾದ ಮೊದಲ ವರ್ಷದಲ್ಲಿ ಶೇ 10, ಎರಡನೇ ವರ್ಷದಲ್ಲಿ ಶೇ. 20 ಮತ್ತು ಮೂರನೇ ವರ್ಷದಲ್ಲಿ ಶೇ 30ರಷ್ಟು ಶಾಲಾ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇ.ವಿ ನೀತಿಯ ಅಧಿಸೂಚನೆ ದಿನಾಂಕದಿಂದ ಸರ್ಕಾರಕ್ಕೆ ಸಂಬಂಧಿಪಟ್ಟ ಎಲ್ಲಾ ಬಾಡಿಗೆ ವಾಹನಗಳು ಶೇ 100 ರಷ್ಟು ಎಲೆಕ್ಟ್ರಿಕ್ ಆಗಿರಬೇಕು. ಅಲ್ಲದೆ, ಸರ್ಕಾರದ ಹೊಸ ವಾಹನ ಖರೀದಿಗಳು ಕೇವಲ ಎಲೆಕ್ಟ್ರಿಕ್ ಆಗಿರುತ್ತವೆ. ಸಾರಿಗೆ ವ್ಯವಸ್ಥೆಯಡಿ ಬರುವ ಹೊಸ ಬಸ್‌ಗಳು ಎಲೆಕ್ಟ್ರಿಕ್‌ಗೆ ಬದಲಾಗಲಿವೆ. ಭವಿಷ್ಯದಲ್ಲಿ ಹೈಡ್ರೋಜನ್‌ನಂತಹ ಸ್ವಚ್ಛ ತಂತ್ರಜ್ಞಾನಗಳಿಗೂ ಅವಕಾಶ ನೀಡಲಾಗುವುದು ಎಂದು ಕರಡಿನಲ್ಲಿ ತಿಳಿಸಲಾಗಿದೆ.

ಇ.ವಿಗೆ ಪ್ರೋತ್ಸಾಹ...

ಎಲೆಕ್ಟ್ರಿಕ್‌ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಲು ಸರ್ಕಾರವು ಕಾಲಮಿತಿಯಲ್ಲಿ ಸಬ್ಸಿಡಿ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡಲಿದೆ ಎಂದು ಕರಡು ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ₹2.25 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ. ಮೊದಲ ವರ್ಷದಲ್ಲಿ ಹೆಚ್ಚಿನ ಸಬ್ಸಿಡಿ ಇರಲಿದ್ದು, ನಂತರದ ವರ್ಷಗಳಲ್ಲಿ ಇದು ಕಡಿಮೆಯಾಗುತ್ತಾ ಹೋಗುತ್ತದೆ.

ಬಿಎಸ್-4 ಮತ್ತು ಅದಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ವಾಹನಗಳಿಗೆ ಅನುಗುಣವಾಗಿ ₹10,000 ದಿಂದ ₹1 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಚಳಿಗಾಲದ ಸಂದರ್ಭದಲ್ಲಿ ಉಂಟಾಗುವ ದಟ್ಟ ಮಂಜು ಮತ್ತು ಅತಿಯಾದ ವಾಯುಮಾಲಿನ್ಯ ತಡೆಗಟ್ಟಲು ಈ ಎಲೆಕ್ಟ್ರಿಕ್ ವಾಹನ ನೀತಿಯು ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries