ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನ ಸಭೆಗೆ ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. ತೃಣ ಮೂಲ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಈ ಬಾರಿ ಚುನಾವಣೆ ಕಣದಲ್ಲಿವೆ.
ಏಪ್ರಿಲ್ 29ರಂದು ಇಲ್ಲಿ ಎರಡನೇ ಹಂತದ ಮತದಾನ ನಡೆದ ಬಳಿಕ ಮೇ 4 ರಂದು ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ ಉತ್ತರ ಬಂಗಾಳದ 152 ಕ್ಷೇತ್ರಗಳು ಮತ್ತು ದಕ್ಷಿಣ ಭಾಗದ ಹಲವಾರು ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಳ್ಳಲಿದೆ.
ಈ ಬಾರಿ ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ಕಣದಲ್ಲಿವೆ. ಹೇಗಾದರೂ ಮಾಡಿ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸುವ ಪಣ ತೊಟ್ಟಿರುವ ಬಿಜೆಪಿ ಈ ಬಾರಿ ಇಲ್ಲಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಂದು ಕರೆಯಲ್ಪಡುವ ತೃಣಮೂಲ ಕಾಂಗ್ರೆಸ್ ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದೆ. 1998 ರಲ್ಲಿ ಮಮತಾ ಬ್ಯಾನರ್ಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಬೇರ್ಪಟ್ಟ ಬಳಿಕ ಈ ಬಣವನ್ನು ಸ್ಥಾಪಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 2021ರಲ್ಲಿ ರಾಜ್ಯದ 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಭರ್ಜರಿ ಗೆಲುವು ದಾಖಲಿಸಿತ್ತು. ಸಾರ್ವಕಾಲಿಕ ಗರಿಷ್ಠ ಶೇ. 47.9ರಷ್ಟು ಮತಗಳನ್ನು ಗಳಿಸಿತ್ತು.
ಭಾರತೀಯ ಜನತಾ ಪಕ್ಷ
ಭಾರತೀಯ ಜನತಾ ಪಕ್ಷ (ಬಿಜೆಪಿ) 2016 ರ ಬಂಗಾಳ ವಿಧಾನಸಭಾ ಚುನಾವಣೆಯ ಅನಂತರ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಳದ ಸಾಂಪ್ರದಾಯಿಕ ಎಡ-ಕಾಂಗ್ರೆಸ್ ಅನ್ನು ಬದಿಗಿಟ್ಟು ಹೋರಾಡುತ್ತಿದೆ. 2021ರಲ್ಲಿ ಬಿಜೆಪಿ ಇಲ್ಲಿ ಕೇವಲ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಬಂಗಾಳದಲ್ಲಿ 12 ಸ್ಥಾನಗಳನ್ನು ಗೆದ್ದಿತು. ಈ ಬಾರಿ ಸಮಿಕ್ ಭಟ್ಟಾಚಾರ್ಯ ಮತ್ತು ಸುವೇಂದು ಅಧಿಕಾರಿ ಮತ್ತು ಸುಕಾಂತ ಮಜುಂದಾರ್ ಅವರಂತಹ ಹಿರಿಯ ನಾಯಕರ ನೇತೃತ್ವದಲ್ಲಿ ಬಂಗಾಳದಲ್ಲಿ ಸರ್ಕಾರ ರಚಿಸುವ ಕನಸು ಕಾಣುತ್ತಿದೆ.
ಕಾಂಗ್ರೆಸ್
ಒಂದು ಕಾಲದಲ್ಲಿ ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿದ್ದ ಕಾಂಗ್ರೆಸ್ ಪಕ್ಷವು ಈಗ ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಹೆಣಗಾಡುತ್ತಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಲ್ಲದ ರಾಜಕೀಯ ಅಸ್ಥಿರತೆಯ ಸ್ಥಿತಿ ಅನುಭವಿಸಿತ್ತು. ಈ ಸಂದರ್ಭದಲ್ಲಿ ಎಡ ಮತ್ತು ಐಎಸ್ಎಫ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೂಡ ನಾಯಕತ್ವದ ಕೊರತೆ, ಹಣಕಾಸಿನ ಸಮಸ್ಯೆ ಅನುಭವಿಸಿತ್ತು. 2024 ರ ಲೋಕಸಭಾ ಚುನಾವಣೆಯ 28 ಲಕ್ಷ ಮತಗಳನ್ನು ಪಡೆದ ಕಾಂಗ್ರೆಸ್ 11 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು.
ಸಿಪಿಐ-ಎಂ
ಕಾಂಗ್ರೆಸ್ ಮತ್ತು ಐಎಸ್ಎಫ್ ಜೊತೆಗಿನ ಮೈತ್ರಿಯ ಹೊರತಾಗಿಯೂ 2021 ರ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾದ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನು ಪಡೆಯದ ಸಿಪಿಐ-ಎಂ ಈಗ ತಳಮಟ್ಟದಲ್ಲಿ ಮತ್ತೆ ಚೇತರಿಸಿಕೊಳ್ಳಲು ಕಾಯುತ್ತಿದೆ. ಬಂಗಾಳದಲ್ಲಿ 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷವು ಈ ಬಾರಿ ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಜನಸಂಪರ್ಕ ಅಭಿಯಾನದ ಭಾಗವಾಗಿ ತನ್ನ ರಾಜ್ಯವ್ಯಾಪಿ "ಬಾಂಗ್ಲಾ ಬಚಾವೋ ಯಾತ್ರೆ" ನಡೆಸಿತ್ತು.
ಐಎಸ್ ಎಫ್
2021ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಹುಟ್ಟಿಕೊಂಡ ಭಾರತೀಯ ಜಾತ್ಯತೀತ ರಂಗ (ಐಎಸ್ ಎಫ್ ದಿಂದ ರಾಜ್ಯ ವಿಧಾನಸಭೆ ಪ್ರವೇಶಿಸಿದ ಏಕೈಕ ವ್ಯಕ್ತಿ ನೌಶಾದ್ ಸಿದ್ದೀಕ್. ಇವರು ಟಿಎಂಸಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಧರ್ಮಗುರು ಮತ್ತು ರಾಜಕಾರಣಿ ಫರ್ಫುರಾ ಷರೀಫ್ನ ಪೀರ್ಜಾದಾ ಅಬ್ಬಾಸ್ ಸಿದ್ದೀಕಿ ಅವರು 2021 ರಲ್ಲಿ ಐಎಸ್ಎಫ್ ಅನ್ನು ನಿರ್ಮಿಸಿದರು. 2021ರಲ್ಲಿ ಅವರ ಪಕ್ಷ ಭಾಂಗರ್ನಲ್ಲಿನ ಒಂದು ಸ್ಥಾನವು ದೊಡ್ಡ ಪ್ರಮಾಣದಲ್ಲಿ ಗೆದ್ದುಕೊಂಡು ಟಿಎಂಸಿ ನೆಲದಲ್ಲಿ ಬಲವಾದ ಬೇರು ನೆಟ್ಟಿದೆ.
ಎಐಎಂಐಎಂ
ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಪಶ್ಚಿಮ ಬಂಗಾಳದಲ್ಲಿ ತನ್ನ ಛಾಪು ಮೂಡಿಸಲು 2021 ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಇದು ಇಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾಯಿತು. ಮಾಲ್ಡಾ, ಮುರ್ಷಿದಾಬಾದ್ ಮತ್ತು ಉತ್ತರ ದಿನಾಜ್ಪುರ ಜಿಲ್ಲೆಗಳಲ್ಲಿ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಬಾರಿ ಪಕ್ಷವು 11 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಎಜೆಯುಪಿ
ಪಕ್ಷದ ನಾಯಕತ್ವದೊಂದಿಗೆ ಪದೇ ಪದೇ ಘರ್ಷಣೆ ಉಂಟಾಗಿ ಟಿಎಂಸಿಯಿಂದ ಅಮಾನತುಗೊಂಡಿದ್ದ ಹುಮಾಯೂನ್ ಕಬೀರ್ ಅವರು ಎಜೆಯುಪಿ ಎಂಬ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಇವರ ಪಕ್ಷವು 180 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

