ಜನವರಿ 28ರಂದು ಆರಂಭಗೊಂಡ ಬಜೆಟ್ ಅಧಿವೇಶನದ ಅವಧಿಯಲ್ಲಿ ರಾಜ್ಯಸಭೆಯು ಒಟ್ಟು 157 ತಾಸುಗಳ ಹಾಗೂ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಿದೆಯೆಂದು ರಾಜ್ಯಸಭಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಅವರು ತಿಳಿಸಿದರು.
ಏಪ್ರಿಲ್ 16ರಿಂದ 18ರವರೆಗೆ ನಡೆದ ಮೂರು ದಿನಗಳ ವಿಶೇಷ ಬೈಠಕ್‌ನಲ್ಲಿ ಹರಿವಂಶ್ ಅವರನ್ನು ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿತೆಂದು ಅವರು ತಿಳಿಸಿದರು.
ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಯವರ ಭಾಷಣ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ 79 ಮಂದಿ ಸದಸ್ಯರು ಪಾಲ್ಗೊಂಡಿದ್ದರು .2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವಿಸ್ತೃತ ಚರ್ಚೆಯಲ್ಲಿ 97 ಮಂದಿ ಸದಸ್ಯರು ಭಾಗವಹಿಸಿದ್ದರು. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಪಶ್ಚಿಮ ಏಶ್ಯಾ ಪರಿಸ್ಥಿತಿಯ ಕುರಿತಾಗಿಯೂ ಸದಸ್ಯರು ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆಂದು ಅವರು ತಿಳಿಸಿದರು.
ಈ ಬಜೆಟ್ ಅಧಿವೇಶನದಲ್ಲಿ ಒಟ್ಟು 117 ಪ್ರಶ್ನೆಗಳನ್ನು ಕೇಳಲಾಗಿತ್ತು. 446 ಶೂನ್ಯ ವೇಳೆಯಲ್ಲಿ ಹೇಳಿಕೆಗಳನ್ನು ನೀಡಲಾಗಿತ್ತು ಹಾಗೂ 207 ವಿಶೇಷ ಉಲ್ಲೇಖಗಳನ್ನು ಮಾಡಲಾಗಿತ್ತು ಎಂದವರು ತಿಳಿಸಿದರು.
ಲೋಕಸಭೆಯ ಬಜೆಟ್ ಅಧಿವೇಶನವು ಶನಿವಾರ ಪೂರ್ವಾಹ್ನ 11:00 ಗಂಟೆಗೆ ಮುಕ್ತಾಯಗೊಂಡಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಲೋಕಸಭೆಯ ಬಜೆಟ್‌ಅಧಿವೇಶನ ಮುಕ್ತಾಯದ ಮುನ್ನಾ ದಿನ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಅವಕಾಶ ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿ, ಬಿದ್ದು ಹೋಗಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಕೂಡಾ ಮಾಡಿತ್ತು.

