ವಾಷಿಂಗ್ಟನ್: ಪಶ್ಚಿಮ ಏಷ್ಯಾದ ರಾಷ್ಟ್ರವಾದ ಇರಾನ್ ಅನ್ನು ಭೂಪಟದಿಂದ ಅಳಿಸಿಹಾಕುವುದಾಗಿ ನೀಡಿದ್ದ ಗಡುವು ಮುಗಿಯಲು ಕೇವಲ 90 ನಿಮಿಷಗಳ ಮೊದಲು, ಪಾಕಿಸ್ತಾನ ಪ್ರಸ್ತಾಪಿಸಿದ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇರಾನ್ ನಾಗರಿಕತೆ ನಾಶಪಡಿಸುವ ಅತಿರೇಕದ ಬೆದರಿಕೆಗಳ ಹಿನ್ನೆಲೆಯಲ್ಲಿ ಡೆಮಾಕ್ರಟ್‌ಗಳು ಟ್ರಂಪ್ ಅವರ ಪದಚ್ಯುತಿಗೆ ಒತ್ತಾಯಿಸುತ್ತಿರುವ ಬೆನ್ನಲ್ಲೇ, ಟ್ರಂಪ್ ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್ ಸೋಷಿಯಲ್'ನಲ್ಲಿ ಕದನ ವಿರಾಮ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.
'ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಯ ಹಾಗೂ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಒಪ್ಪುವ ಷರತ್ತಿನ ಆಧಾರದ ಮೇಲೆ ಇಂದು (ಮಂಗಳವಾರ) ರಾತ್ರಿ ಇರಾನ್ ಮೇಲೆ ನಡೆಸಬೇಕಿದ್ದ ವಿನಾಶಕಾರಿ ದಾಳಿಯನ್ನು ತಡೆಹಿಡಿಯಲು ನಾನು ನಿರ್ಧರಿಸಿದ್ದೇನೆ' ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
'ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಆಕ್ರಮಣವನ್ನು ಎರಡು ವಾರಗಳ ಕಾಲ ತಡೆಹಿಡಿಯಲು ನಾನು ಒಪ್ಪುತ್ತೇನೆ' ಎಂದು ಹೇಳಿರುವ ಟ್ರಂಪ್, ಇದು ಉಭಯ ದೇಶಗಳ ನಡುವಿನ ಕದನ ವಿರಾಮವಾಗಿರಲಿದೆ ಎಂದೂ ಹೇಳಿದ್ದಾರೆ.
ಇರಾನ್ ಮತ್ತು ಪಾಕ್ ಪ್ರತಿಕ್ರಿಯೆ
ಟೆಹರಾನ್‌ನಲ್ಲಿ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕೂಡ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೆ, ಶುಕ್ರವಾರದಿಂದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
ಪಾಕಿಸ್ತಾನದ ಪ್ರಧಾನಿ ಷರೀಫ್ ಅವರು ಏಪ್ರಿಲ್ 10ರ ಶುಕ್ರವಾರದಂದು ಇಸ್ಲಾಮಾಬಾದ್‌ಗೆ ಆಗಮಿಸಿ, ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸುವ ಅಂತಿಮ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಅಮೆರಿಕ ಮತ್ತು ಇರಾನ್ ನಿಯೋಗಗಳಿಗೆ ಆಹ್ವಾನ ನೀಡಿದ್ದಾರೆ.
'ಉಭಯ ದೇಶಗಳ ಮುಖಾಮುಖಿ ಮಾತುಕತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಅಧ್ಯಕ್ಷರು (ಟ್ರಂಪ್) ಅಥವಾ ಶ್ವೇತಭವನ ಅಧಿಕೃತವಾಗಿ ಘೋಷಿಸುವವರೆಗೆ ಯಾವುದೂ ಅಂತಿಮವಲ್ಲ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟಪಡಿಸಿದ್ದಾರೆ.
10 ಅಂಶಗಳ ಪ್ರಸ್ತಾಪ
ಇರಾನ್‌ನಿಂದ 10 ಅಂಶಗಳ ಪ್ರಸ್ತಾಪವನ್ನು ಸ್ವೀಕರಿಸಲಾಗಿದ್ದು, ಅದು ಮಾತುಕತೆಗೆ ಸೂಕ್ತವಾದ ಆಧಾರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಎರಡು ವಾರಗಳ ಅವಧಿಯನ್ನು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ದೊಡ್ಡ ಒಪ್ಪಂದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
'ನಾವು ಈಗಾಗಲೇ ನಮ್ಮ ಎಲ್ಲಾ ಸೇನಾ ಗುರಿಗಳನ್ನು ತಲುಪಿದ್ದೇವೆ. ಇರಾನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಶಾಂತಿಗಾಗಿ ಒಂದು ನಿರ್ಣಾಯಕ ಒಪ್ಪಂದಕ್ಕೆ ನಾವು ಹತ್ತಿರವಾಗಿದ್ದೇವೆ' ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇರಾನ್‌ನ ವಿದೇಶಾಂಗ ಸಚಿವ ಹೇಳಿದ್ದೇನು?
ಇರಾನ್ ಮೇಲಿನ ದಾಳಿಗಳು ನಿಂತರೆ, ನಮ್ಮ ಶಕ್ತಿಶಾಲಿ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ಮುಂದಿನ ಎರಡು ವಾರಗಳವರೆಗೆ ಇರಾನ್ ಸೇನಾ ಸಮನ್ವಯದೊಂದಿಗೆ ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರ ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

