ಬೈರೂತ್: ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಆಂಬ್ಯುಲೆನ್ಸ್ ವೊಂದು ಗುರಿಯಾಗಿರುವ ಘಟನೆ ವರದಿಯಾಗಿದೆ. ಲೆಬನಾನ್ ನ ಹಲವು ಸುದ್ದಿ ಸಂಸ್ಥೆಗಳ ಪ್ರಕಾರ, ಕರಾವಳಿ ನಗರ ಥೈರ್ ಸಮೀಪದ ಕ್ಲೈಲೆಹ್ ಪಟ್ಟಣದಲ್ಲಿ ಈ ದಾಳಿ ನಡೆದಿದೆ ಎಂದು Aljazeera ವರದಿ ಮಾಡಿದೆ.
ಗಾಯಾಳುಗಳನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ದಾಳಿಯಿಂದ ಉಂಟಾದ ಹಾನಿ ಹಾಗೂ ಗಾಯಾಳುಗಳ ನಿಖರ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಇದರ ನಡುವೆ, ಲೆಬನಾನ್ ಆರೋಗ್ಯ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದು, ದೇಶದ ವಿವಿಧ ಭಾಗಗಳಲ್ಲಿ ವೈದ್ಯರು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಇಸ್ರೇಲ್ ನಿಯಮಿತವಾಗಿ ಗುರಿಯಾಗಿಸುತ್ತಿದೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವ ಸಿಬ್ಬಂದಿಯ ಮೇಲೆ ದಾಳಿ ನಡೆಸುವುದು ಮಾನವೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿರುವ ಕದನ ವಿರಾಮ ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

