ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಹರಿಯಾಣದ ಐವರು ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಹರಿಯಾಣ ಕಾಂಗ್ರೆಸ್ ಶಿಫಾರಸು ಮಾಡಿದೆ.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಾದ ಶೆಲ್ಲಿ ಚೌಧರಿ, ರೇಣು ಬಾಲಾ, ಮೊಹಮ್ಮದ್ ಇಲ್ಯಾಸ್, ಮೊಹಮ್ಮದ್ ಇಸ್ರೇಲ್, ಜರ್ನೈಲ್ ಸಿಂಗ್ ಅವರು ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿದ್ದರು.
ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸತೀಶ್ ಸತೀಶ್ ನಂದಾಲ್ ಪರವಾಗಿ ಪಕ್ಷದ ಐವರು ಶಾಸಕರು ಅಡ್ಡ ಮತದಾನ (Cross-voting) ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮ ಸಮಿತಿ ವರದಿಯನ್ನು ಸಿದ್ಧಪಡಿಸಿ ತನ್ನ ನಿರ್ಧಾರವನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಿತ್ತು.
ಶೋಕಾಸ್ ನೋಟಿಸ್ಗಳಿಗೆ ಶಾಸಕರು ನೀಡಿದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ ಸಮಿತಿಯು ಆ ಶಾಸಕರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದೆ ಎಂದು ಭಾನುವಾರ ಪಕ್ಷದ ಮೂಲಗಳು ಖಚಿತಪಡಿಸಿವೆ. ಸದ್ಯದಲ್ಲೇ ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸಲಿದೆ.
ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸತೀಶ್ ನಂದಾಲ್ ಪರವಾಗಿ ಅಡ್ಡ ಮತದಾನ ಮಾಡಿದ ಆರೋಪವಿದೆ.
ಅಡ್ಡ ಮತದಾನ ಮಾಡಿದ ಶಾಸಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇವರು ಕೇವಲ ಪಕ್ಷಕ್ಕೆ ಮಾತ್ರವಲ್ಲ, ತಮಗೆ ಮತ ನೀಡಿದ ಜನರಿಗೂ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಈ ಘಟನೆ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದರು.

