ರಾಯಪುರ: ನಾಲ್ಕು ದಶಕಗಳ ಕಾಲ ರಕ್ತಸಿಕ್ತ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಛತ್ತೀಸ್‌ಗಢದ ಬಸ್ತರ್ ಪ್ರದೇಶ ಈಗ ಶಾಂತಿಯತ್ತ ಹೆಜ್ಜೆ ಇಡುತ್ತಿದೆ.
ಕೇಂದ್ರ ಸರ್ಕಾರ ಮಾರ್ಚ್ 31ರಂದು ಈ ಪ್ರದೇಶವನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ ಬೆನ್ನಲ್ಲೇ, ಅಲ್ಲಿನ ಅರಣ್ಯ ಪ್ರದೇಶ, ಗುಡ್ಡಗಾಡುಗಳಲ್ಲಿ ಅಡಗಿಸಿಟ್ಟಿರುವ ಐಇಡಿಯನ್ನು ನಿಷ್ಕ್ರಿಯಗೊಳಿಸಲು ಹಾಗೂ ಕಚ್ಚಾ ಬಾಂಬ್‌ಗಳ ನಿರ್ವಹಣೆ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಶರಣಾದ ನಕ್ಸಲರಿಂದ ತರಬೇತಿ ಕೊಡಿಸಲು ಇಲ್ಲಿನ ಸರ್ಕಾರ ಮುಂದಾಗಿದೆ.
ಹೌದು, ದಟ್ಟ ಕಾನನದಲ್ಲಿ ಹೂತ್ತಿಟ್ಟಿರುವ ಕಚ್ಚಾ ಬಾಂಬ್ ಹಾಗೂ ಸುಧಾರಿತ ಸ್ಫೋಟಕಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲು ಶರಣಾಗಿರುವ ನಕ್ಸಲರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸ್ಫೋಟಕಗಳ ಬಗ್ಗೆ ಪರಿಣಿತಿ ಪಡೆದಿರುವ ನಕ್ಸಲರನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಪೊಲೀಸ್ ಸಿಬ್ಬಂದಿಗೆ ತರಬೇತಿ ಕೊಡಿಸಲಾಗುತ್ತಿದೆ.
ಸ್ಫೋಟಕಗಳ ತಯಾರಿಕೆ ಮತ್ತು ಬಳಕೆಯಲ್ಲಿ ಅಪಾರ ಅನುಭವ ಹೊಂದಿರುವ 20ಕ್ಕೂ ಹೆಚ್ಚು ನಕ್ಸಲರನ್ನು ಈ ವಿಶೇಷ ಕಾರ್ಯಕ್ಕಾಗಿ ಗುರುತಿಸಲಾಗಿದೆ. ಇವರಿಗೆ ಪೊಲೀಸ್ ತರಬೇತಿ ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳಿಗೆ ತರಬೇತಿ ನೀಡುವ ಜವಾಬ್ದಾರಿ ವಹಿಸಲಾಗಿದೆ ಎಂದು ಬಸ್ತರ್‌ನ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಟ್ಟಿಲಿಂಗಂ ತಿಳಿಸಿದ್ದಾರೆ.
ಶರಣಾದ ನಕ್ಸಲರ ಅನುಭವವನ್ನು ಬಳಸಿಕೊಂಡು ಸ್ಫೋಟಕಗಳ ಅಪಾಯವನ್ನು ಮೆಟ್ಟಿ ನಿಲ್ಲುವುದು, ನಮ್ಮ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಸ್ಥಳೀಯ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಈ ಪ್ರಯತ್ನದ ಉದ್ದೇಶ ಎಂದಿದ್ದಾರೆ.

ನಕ್ಸಲರು-ಪ್ರಾತಿನಿಧಿಕ ಚಿತ್ರ
ತರಬೇತಿಯ ಪ್ರಮುಖ ಅಂಶಗಳು...
ಅರಣ್ಯದಲ್ಲಿ ಸ್ಫೋಟಕಗಳನ್ನು ಅಡಗಿಸಿಡುವುದು ಹೇಗೆ? ಇವುಗಳನ್ನು ಸಕ್ರಿಯಗೊಳಿಸುವ ಮತ್ತು ನಿಷ್ಕ್ರಿಯಗೊಳಿಸುವ ತಂತ್ರಗಳೇನು? ಎಂಬ ರಹಸ್ಯಗಳನ್ನು ಇವರು ಭದ್ರತಾ ಪಡೆಗಳಿಗೆ ಬಿಚ್ಚಿಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೇವಲ ಭದ್ರತಾ ಸಿಬ್ಬಂದಿ ಮಾತ್ರವಲ್ಲದೆ ಕಾಡಿನ ದಾರಿಯಲ್ಲಿ ಓಡಾಡುವ ಸ್ಥಳೀಯ ಬುಡಕಟ್ಟು ಜನರು ಮತ್ತು ಜಾನುವಾರುಗಳ ಜೀವ ರಕ್ಷಿಸುವುದು ಈ ತರಬೇತಿಯ ಮೂಲ ಉದ್ದೇಶ. ಈ ಹಿಂದೆ ಅರಣ್ಯದಲ್ಲಿ ಹೂತ್ತಿಟ್ಟಿದ್ದ ನೂರಾರು ಸ್ಫೋಟಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಮೂಲಕ ಬಸ್ತರ್ ಅನ್ನು ಸಂಪೂರ್ಣ 'ಸುರಕ್ಷತಾ ವಲಯವನ್ನಾಗಿ' ರೂಪಿಸುವ ದಶಕಗಳ ಸವಾಲಿಗೆ ಅಂತ್ಯ ಹಾಡುವ ಪ್ರಯತ್ನ ಇದಾಗಿದೆ.
ಬಸ್ತರ್‌ನಲ್ಲಿ ಭದ್ರತಾ ಪಡೆಗಳಿಗೆ ಐಇಡಿಗಳು ದೊಡ್ಡ ತಲೆನೋವಾಗಿದ್ದವು. 2001 ರಿಂದ 2026 ಮಾರ್ಚ್‌ವರೆಗೆ ಈ ಪ್ರದೇಶದಲ್ಲಿ ಕನಿಷ್ಠ 4,607 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ 1,280 ಸ್ಫೋಟಗಳು ಸಂಭವಿಸಿದ್ದು, ನೂರಾರು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಸ್ನಿಫರ್ ನಾಯಿಗಳು ಮತ್ತು ಆಧುನಿಕ ತಂತ್ರಜ್ಞಾನವಿದ್ದರೂ ದಟ್ಟ ಅರಣ್ಯದ ಒಳಗಿನ ಕೆಲವು ಪ್ರದೇಶಗಳಲ್ಲಿ ಸ್ಫೋಟಕ ಪತ್ತೆಹಚ್ಚುವುದು ಸವಾಲಾಗಿತ್ತು. ನಕ್ಸಲ್ ಸಂಘಟನೆಯಲ್ಲಿದ್ದಾಗ ಐಇಡಿ ವಿಭಾಗದಲ್ಲಿ ಕೆಲಸ ಮಾಡಿದವರೇ ಈ ಕಾರ್ಯಕ್ಕೆ ಕೈಜೋಡಿಸಿರುವುದರಿಂದ ಈ ಸವಾಲನ್ನು ಸುಲಭವಾಗಿ ಮೆಟ್ಟಿ ನಿಲ್ಲಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆಶಿಸಿದ್ದಾರೆ.
ತಮ್ಮ ಜ್ಞಾನವನ್ನು ತರಬೇತಿಯಲ್ಲಿ ಹಂಚಿಕೊಳ್ಳುವ ಮೂಲಕ, ಶರಣಾದ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಸೇರಲು ಮತ್ತು ಗೌರವಯುತ ಜೀವನ ನಡೆಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

