ತಿರುವನಂತಪುರ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಇದರಂತೆ ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್‌ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿವೆ.
ಕೇರಳದ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ಚುನಾವಣೆ ಹಿಂದೆಂದೂ ಕಾಣದ ಕುತೂಹಲಕ್ಕೆ ಸಾಕ್ಷಿಯಾಗಿದೆ.
ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ (ಎಲ್‌ಡಿಎಫ್) ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಈ ಬಾರಿ ಪಿಣರಾಯಿ 'ಹ್ಯಾಟ್ರಿಕ್' ಸಾಧನೆಯ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುಡಿಎಫ್) ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ 'ಹ್ಯಾಟ್ರಿಕ್' ಕನಸು ಕಾಣುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಿನ್ನಡೆಯಾಗಲಿದೆ. ಕೇರಳದಲ್ಲಿ ಪ್ರಮುಖವಾಗಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆ ಇರುವುದು ಕಂಡುಬಂದಿದೆ.
ಕಾಂಗ್ರೆಸ್‌ಗೆ ಅಸ್ತಿತ್ವದ ಸವಾಲು...
ಕಳೆದೆರಡು ಬಾರಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಈ ಬಾರಿ ಅಸ್ತಿತ್ವದ ಸವಾಲನ್ನು ಎದುರಿಸುತ್ತಿದೆ. ಪ್ರಮುಖವಾಗಿಯೂ ಪಕ್ಷದ ನಾಯಕರೊಳಗಿನ ಕಚ್ಚಾಟ, ಭಿನ್ನಭಿಪ್ರಾಯವು ಹಿನ್ನಡೆಗೆ ಕಾರಣವಾಗಿತ್ತು. ಆದರೆ ಈಗ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ಅಲ್ಪ ನಿರಾಳವಾಗುವಂತೆ ಮಾಡಿದೆ.
ಎಡರಂಗದ 'ನವಕೇರಳಂ' ಅಭಿವೃದ್ಧಿ ಮಾದರಿ ಮತ್ತು ವಿವಿಧ ಕಲ್ಯಾಣ ಯೋಜನೆಗಳು ಸರ್ಕಾರದ ಬಲವಾದ ಅಸ್ತ್ರಗಳಾಗಿವೆ. ಆದರೆ, ನಿರುದ್ಯೋಗ, ದರ ಏರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಮತ್ತು ರಾಜ್ಯದ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.
ಕಾಂಗ್ರೆಸ್ ಈ ಬಾರಿ 'ಇಂದಿರಾ ಗ್ಯಾರಂಟಿ' ಯೋಜನೆಗಳ ಮೂಲಕ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಮುಂದಾಗಿದೆ.
ಇನ್ನೊಂದೆಡೆ, ಬಿಜೆಪಿಯ ಎನ್‌ಡಿಎ ಕೂಟ ಕಳೆದ ಬಾರಿ ಕಳೆದುಕೊಂಡಿದ್ದ ಸ್ಥಾನಗಳನ್ನು ಮರಳಿ ಪಡೆಯಲು ಮತ್ತು ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿದೆ.
ಚುನಾವಣೋತ್ತರ ಸಮೀಕ್ಷೆ:
140 ಸದಸ್ಯ ಬಲದ ಕೇರಳದ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 71 ಆಗಿದೆ. ಬಹುತೇಕ ಎಲ್ಲ ಸಮೀಕ್ಷೆಗಳು ಯುಡಿಎಫ್ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.

ಯುಡಿಎಫ್ ಗಳಿಕೆ ಎಷ್ಟು?
ಪಿ-ಮಾರ್ಕ್ ಪ್ರಕಾರ 71ರಿಂದ 79, ಮ್ಯಾಟ್ರಿಜ್ ಪ್ರಕಾರ 70ರಿಂದ 75, ಪೀಪಲ್ಸ್ ಪಲ್ಸ್ ಪ್ರಕಾರ 75ರಿಂದ 85, ಆಯಕ್ಸಿಸ್ ಮೈಇಂಡಿಯಾ ಪ್ರಕಾರ 78ರಿಂದ 90 ಮತ್ತು ಜೆವಿಸಿ ಪ್ರಕಾರ 72ರಿಂದ 84 ಸ್ಥಾನಗಳನ್ನು ಯುಡಿಎಫ್ ಪಡೆಯಲಿದೆ. ಪಿ-ಮಾರ್ಕ್ ಹಾಗೂ ಮ್ಯಾಟ್ರಿಜ್ ಸರಳ ಬಹುಮತವನ್ನು ನೀಡಿದ್ದರೆ ಉಳಿದ ಮೂರು ಸಮೀಕ್ಷೆಗಳು ಸ್ಪಷ್ಟ ಬಹುಮತವನ್ನು ಯುಡಿಎಫ್‌ಗೆ ನೀಡಿವೆ.
ಎಲ್‌ಡಿಎಫ್‌ಗೆ ಹಿನ್ನಡೆ...
ಪಿ-ಮಾರ್ಕ್ ಸಮೀಕ್ಷೆ ಪ್ರಕಾರ 62ರಿಂದ 69, ಮ್ಯಾಟ್ರಿಜ್ ಪ್ರಕಾರ 60ರಿಂದ 65, ಪೀಪಲ್ಸ್ ಪಲ್ಸ್ ಪ್ರಕಾರ 55ರಿಂದ 65, ಆಯಕ್ಸಿಸ್ ಮೈಇಂಡಿಯಾ ಪ್ರಕಾರ 49ರಿಂದ 62 ಮತ್ತು ಜೆವಿಸಿ ಪ್ರಕಾರ 52ರಿಂದ 61 ಸ್ಥಾನಗಳನ್ನು ಎಲ್‌ಡಿಎಫ್ ಪಡೆಯಲಿದೆ. ಸಮೀಕ್ಷೆಗಳ ಪ್ರಕಾರ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಕಂಡುಬಂದಿದೆ. ಯಾವ ಸಮೀಕ್ಷೆಗಳಲ್ಲೂ ಎಲ್‌ಡಿಎಫ್‌ಗೆ ಸರಳ ಬಹುಮತ ದೊರಕಿಲ್ಲ ಎಂಬುದು ಸ್ಪಷ್ಟವಾಗಿದೆ.
ಬಿಜೆಪಿ ಗಮನಾರ್ಹ ಸಾಧನೆ?
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕೇರಳದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಲಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡುಲಿದೆ. ಪಿ-ಮಾರ್ಕ್ ಪ್ರಕಾರ 1ರಿಂದ 4, ಮ್ಯಾಟ್ರಿಜ್ ಪ್ರಕಾರ 3ರಿಂದ 5, ಪೀಪಲ್ಸ್ ಪಲ್ಸ್ ಹಾಗೂ ಆಯಕ್ಸಿಸ್ ಮೈಇಂಡಿಯಾ ಪ್ರಕಾರ 3ರವರೆಗೆ ಮತ್ತು ಜೆವಿಸಿ ಪ್ರಕಾರ 3ರಿಂದ 7 ಸ್ಥಾನಗಳನ್ನು ಎನ್‌ಡಿಎ ಪಡೆಯಲಿದೆ.
2021ರ ಫಲಿತಾಂಶ ಹೀಗಿತ್ತು (ಒಟ್ಟು 140)
ಎಲ್‌ಡಿಎಫ್: 99
ಯುಡಿಎಫ್: 41
ಎನ್‌ಡಿಎ: 0
ಒಟ್ಟಾರೆಯಾಗಿ, 140 ಕ್ಷೇತ್ರಗಳ ಈ ಕದನದಲ್ಲಿ ಪಿಣರಾಯಿ ವಿಜಯನ್ ಅವರ ವರ್ಚಸ್ಸು ಮತ್ತು ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ಈ ಚುನಾವಣೆಯ ದಿಕ್ಕನ್ನು ನಿರ್ಧರಿಸಲಿದೆ. ಇವೆಲ್ಲಕ್ಕೂ ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳುವಾಗ ಸ್ಪಷ್ಟ ಉತ್ತರ ದೊರಕಲಿದೆ.

