ನವದೆಹಲಿ: ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡುತ್ತಿದೆ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳುವ ವಾಟ್ಸ್‌ಆಯಪ್ ಸಂದೇಶವನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದಲ್ಲಾ ಒಂದು ನಕಲಿ ಲಿಂಕ್‌ಗಳು ಹರಿದಾಡುತ್ತಲೇ ಇರುತ್ತವೆ.
ಅವನ್ನು ನಂಬಿ ಅದೆಷ್ಟೋ ಜನರು ಮೋಸ ಹೋಗಿದ್ದು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡುತ್ತಿದೆ ಎಂದು ಹೇಳುವ ಲಿಂಕ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ 'ಪಿಐಬಿ' ಫ್ಯಾಕ್ಟ್‌ಚೆಕ್ ಪೋಸ್ಟ್ ಹಂಚಿಕೊಂಡಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದೆ.
PIB ಫ್ಯಾಕ್ಟ್‌ಚೆಕ್ ಪೋಸ್ಟ್‌ನಲ್ಲಿ ಹೇಳಿದ್ದೇನು?
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳೇ? ರಾಷ್ಟ್ರೀಯ ವಿದ್ಯಾರ್ಥಿ ಲ್ಯಾಪ್‌ಟಾಪ್ ಯೋಜನೆ 2026 ಅಡಿಯಲ್ಲಿ ಉಚಿತ ಲ್ಯಾಪ್‌ಟಾಪ್‌ಗಳಿಗಾಗಿ ಸರ್ಕಾರ ಅರ್ಜಿಗಳನ್ನು ಸ್ವೀಕರಿಸುತ್ತಿದೆ ಎಂದು ಹೇಳುವ ವಾಟ್ಸ್‌ಆಯಪ್ ಸಂದೇಶವು ಹರಿದಾಡುತ್ತಿದೆ. ಇದೊಂದು ನಕಲಿ ಸುದ್ದಿಯಾಗಿದೆ. ಭಾರತ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ. ಸಾಮಾನ್ಯವಾಗಿ ಅಂತಹ ಸಂದೇಶಗಳು ಜನರಿಗೆ ಮೋಸ ಮಾಡುವ ಅಥವಾ ವೈಯಕ್ತಿಕ ಮಾಹಿತಿ ಕದಿಯುವ ಪ್ರಯತ್ನಗಳಾಗಿರಬಹುದು. ಯಾವುದೇ ಕಾರಣಕ್ಕೂ ಅಧಿಕೃತ ಮೂಲಗಳಿಂದ ಪರಿಶೀಲಿಸದೆ ಅಂತಹ ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಜೊತೆಗೆ ನಕಲಿ ಸಂದೇಶಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ' ಎಂದು ತಿಳಿಸಿದೆ.

