ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೋಮವಾರ ಮಹತ್ವದ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕಲಾಯಿತು.
ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಟಾಡ್ ಮೆಕ್‌ಕ್ಲೇ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದಿಂದ ಭಾರತದ ಬಹುತೇಕ ಸರಕುಗಳು ಸುಂಕವಿಲ್ಲದೆ, ನ್ಯೂಜಿಲೆಂಡ್‌ಗೆ ಪ್ರವೇಶಿಸಲಿವೆ. ಜೊತೆಗೆ, ಮುಂದಿನ 15 ವರ್ಷದಲ್ಲಿ ನ್ಯೂಜಿಲೆಂಡ್ ಭಾರತದಲ್ಲಿನ ತಯಾರಿಕೆ, ಸೇವೆ, ನಾವೀನ್ಯ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 20 ಬಿಲಿಯನ್ ಡಾಲರ್ (₹1.88 ಲಕ್ಷ ಕೋಟಿ) ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.
ಈ ಒಪ್ಪಂದದ ಅಡಿಯಲ್ಲಿ ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ ಶೇ 100 ರಷ್ಟು ಉತ್ಪನ್ನಗಳಿಗೆ ಸುಂಕ ಮುಕ್ತ ಪ್ರವೇಶ ಸಿಗಲಿದೆ. ಇದರಿಂದ ಜವಳಿ, ಸಿದ್ಧ ಉಡುಪು, ಚರ್ಮದ ವಸ್ತುಗಳು, ಪಾದರಕ್ಷೆ, ಆಭರಣ ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತಿಗೆ ಹೆಚ್ಚಿನ ವೇಗ ಸಿಗಲಿದೆ.
ಕೌಶಲ ಆಧಾರಿತ ಮತ್ತು ಕಾರ್ಮಿಕ ಪ್ರಧಾನ ವಲಯಗಳಲ್ಲಿ ಸ್ಪರ್ಧೆ ಹೆಚ್ಚಾಗುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲಾಭವಾಗಲಿದ್ದು, ಉದ್ಯೋಗ ಸೃಷ್ಟಿಗೆ ನೆರವಾಗಲಿದೆ.

