ದೇಶದ ಕೃಷಿಕರ ನೆಮ್ಮದಿಗೆ ಅಡಿಪಾಯ ಆಗಿರುವ ಮುಂಗಾರು ಒಟ್ಟಾರೆ ದೇಶದ ಆ ವರ್ಷದ ಆರ್ಥಿಕ ಏರುಪೇರುಗಳನ್ನು ನಿರ್ಧರಿಸುವ ಒಂದು ಅದ್ಭುತ ಹವಾಮಾನ ವಿದ್ಯಮಾನ.
ಇಂಥಹ ಮುಂಗಾರು ಏರಿಳಿತದ ಮೇಲೆ ಕೇವಲ ಸ್ಥಳೀಯ ಹವಾಮಾನಗಳು ಕಾರಣವಾಗುವುದಿಲ್ಲ. ಒಮ್ಮೊಮ್ಮೆ ಮುಂಗಾರು ಹುಚ್ಚಾಪಟ್ಟೆ ಸುರಿಯುವುದು, ಮತ್ತೊಮ್ಮೆ ಬರಗಾಲಕ್ಕೆ ಕಾರಣವಾಗುವುದು ದೂರದ ಫೆಸಿಫಿಕ್ ಸಾಗರದಲ್ಲಿ ಸಂಭವಿಸಿಸು ವಿಶಿಷ್ಟ ಸಾಗರ ವಿದ್ಯಮಾನ.
ಭಾರತದಲ್ಲಿ ಆರೇಳು ವರ್ಷದ ತರುವಾಯ ಮುಂಗಾರು ಸಮಯದಲ್ಲಿ ಇದ್ದಕ್ಕಿದ್ದಂತೆ ಮಳೆ ಕಡಿಮೆಯಾಗುವುದಕ್ಕೆ ಎಲ್ ನಿನೊ ಕಾರಣ. ಸೊಂಪಾಗಿ ಮಳೆ ಸುರಿಯಲು ಲಾ ನಿನೊ ಕಾರಣ. ತೀವ್ರ ಮಳೆ ಕೊರತೆಯಾಗಿ ಬರಗಾಲ ಸಂಭವಿಸುವುದು, ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥತಿಗೆ ಸೂಪರ್ ಎಲ್ ನಿನೊ ಕಾರಣ.
ಏನಿದು ಎಲ್ ನಿನೊ?
ಪೆಸಿಫಿಕ್ ಮಹಾಸಾಗರದ ಉಷ್ಣವಲಯದ ಭಾಗದಲ್ಲಿ (ದಕ್ಷಿಣ ಅಮೆರಿಕ ಸಮೀಪ) ಸಮುದ್ರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಹವಾಮಾನ ಪ್ರಕ್ರಿಯೆಯೇ ಎಲ್ ನಿನೊ. ವೈಜ್ಞಾನಿಕವಾಗಿ ಇದು 'ಎಲ್ ನಿನೊ ಸದರನ್ ಆಸಿಲೇಶನ್' ಸೈಕಲ್‌ನ ಒಂದು ಭಾಗವಾಗಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ, ಪೆಸಿಫಿಕ್ ಮಹಾಸಾಗರದ ಮೇಲೆ ಪೂರ್ವದಿಂದ ಪಶ್ಚಿಮಕ್ಕೆ ಬಲವಾದ ಮಾರುತಗಳು ಬೀಸುತ್ತವೆ. ಇವು ಮೇಲ್ಮೈಯ ಬಿಸಿನೀರನ್ನು ಏಷ್ಯಾದತ್ತ ತಳ್ಳುತ್ತವೆ ಮತ್ತು ದಕ್ಷಿಣ ಅಮೆರಿಕದ ಕರಾವಳಿಯಲ್ಲಿ ತಳಭಾಗದ ತಣ್ಣನೆಯ ನೀರು ಮೇಲೆ ಬರಲು ಅವಕಾಶ ಮಾಡಿಕೊಡುತ್ತವೆ. ಆದರೆ, ಎಲ್ ನಿನೊ ಸಂಭವಿಸಿದಾಗ ಈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ದಿಕ್ಕು ಬದಲಿಸುತ್ತವೆ. ಇದರಿಂದಾಗಿ ಪಶ್ಚಿಮದಲ್ಲಿದ್ದ ಬಿಸಿನೀರು ಮರಳಿ ದಕ್ಷಿಣ ಅಮೆರಿಕದ ಪೆರು ಮತ್ತು ಈಕ್ವೆಡಾರ್ ಕರಾವಳಿಯತ್ತ ಹರಿಯಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಸಮುದ್ರದ ಮೇಲ್ಮೈ ತಾಪಮಾನವು ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್‌ನಿಂದ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿ, ಪೆಸಿಫಿಕ್ ಮಹಾಸಾಗರದ ಮೇಲೆ ಗಾಳಿಯನ್ನು ನಿರಂತರವಾಗಿ ಸುತ್ತಿಸುವ 'ವಾಕರ್ ಸರ್ಕ್ಯುಲೇಶನ್' ಏರುಪೇರಾಗುತ್ತದೆ. ಇದು ಸರಿಯಾಗಿದ್ದರೆ ಭಾರತಕ್ಕೆ ಸಕಾಲದಲ್ಲಿ ಮಳೆ ಬರುತ್ತದೆ, ವ್ಯತ್ಯಾಸವಾದಾಗ ಮಳೆಯಲ್ಲೂ ಸಮಸ್ಯೆಯಾಗುತ್ತದೆ.
ಏನಿದು ಲಾ ನಿನೊ?
ಸರಳವಾಗಿ ಹೇಳಬೇಕೆಂದರೆ, ಎಲ್ ನಿನೊದ ಉಲ್ಟಾ ಪ್ರಕ್ರಿಯೆಯೇ ಲಾ ನಿನೊ. ಪೆಸಿಫಿಕ್ ಮಹಾಸಾಗರದ ಮೇಲೆ ಮಾರುತಗಳು ಇದ್ದಾಗ ತಳಭಾಗದ ತಣ್ಣನೆಯ ನೀರು ಮೇಲೆ ಬರಲು ಅವಕಾಶ ಮಾಡಿಕೊಡುತ್ತವೆ. ತಂಪನ್ನು ಏಷ್ಯಾದತ್ತ ತಳ್ಳುತ್ತವೆ. ಆಗ ಈ ಭಾಗದಲ್ಲಿ ಸಮೃದ್ಧಿಯಾಗಿ ಮಳೆ ಸುರಿಯುತ್ತದೆ.
ಏನಿದು ಸೂಪರ್ ಎಲ್ ನಿನೊ?
ಎಲ್ ನಿನೊ ಪ್ರಕ್ರಿಯೆ ಉಂಟಾದಾಗ ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶವು ಅಸಹಜವಾಗಿ ಹೆಚ್ಚಾಗುವ ಅತ್ಯಂತ ಶಕ್ತಿಶಾಲಿ ಹವಾಮಾನ ವಿದ್ಯಮಾನವಾಗಿದೆ. ಹಾಗಾಗಿ ಎಲ್ ನಿನೊದ ಮಾರಕ ಪರಿಣಾಮವೇ ಸೂಪರ್ ಎಲ್ ನಿನೊ ಆಗಿದೆ. ಇದು ಜಾಗತಿಕ ತಾಪಮಾನವನ್ನು ಏರಿಸಿ, ಮುಂಗಾರು ಮಳೆ ಕೊರತೆ, ತೀವ್ರ ಬರಗಾಲ ಮತ್ತು ಭಾರತದಂತಹ ದೇಶಗಳಲ್ಲಿ ಉಷ್ಣ ಗಾಳಿಗೆ ಕಾರಣವಾಗುತ್ತದೆ.
ಈ ಸಾರಿ ಫೆಸಿಫಿಕ್ ಸಾಗರದಲ್ಲುಂಟಾಗುತ್ತಿರುವುದು 'ಸೂಪರ್ ಎಲ್ ನಿನೊ ಪ್ರಕ್ರಿಯೆ' ಎಂದು ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ ಅಧ್ಯಯನ ವರದಿ ತಿಳಿಸಿರುವುದಾಗಿ ಗಾರ್ಡಿಯನ್ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಇದರಿಂದ ಭಾರತವೂ ಸೇರಿದಂತೆ ಏಷ್ಯಾದಲ್ಲಿ ತಾಪಮಾನದಲ್ಲಿ ಭಾರಿ ಏರಿಕೆ, ಮುಂಗಾರು ತೀವ್ರ ಕೊರತೆ ಕಾಡಲಿದೆ. ಹೀಗಾಗಿ ಭಾರತಕ್ಕೆ ಈ ಸಾರಿ ಎಲ್ ನಿನೊ ಬದಲು ಸೂಪರ್ ಎಲ್ ನಿನೊ ಪರಿಣಾಮ ತಟ್ಟಲಿದೆ ಎನ್ನಲಾಗಿದೆ.
ಆಶಾಭಾವನೆ ಇದೆಯೇ?
ಭಾರತದಲ್ಲಿ ಮುಂಗಾರು ದುರ್ಬಲವಾಗಲು ಎಲ್ ನಿನೊ ಸಾಮಾನ್ಯ ಕಾರಣವಾಗಿರುತ್ತದೆ. ಆದರೆ ಕಳೆದ ಏಳು ದಶಕಗಳಲ್ಲಿ ಇಂತಹ 17 ಘಟನೆಗಳಲ್ಲಿ ಕನಿಷ್ಠ ಐದು ಸಲ ಭಾರತವು ಸರಾಸರಿ ಅಥವಾ ಸರಾಸರಿಗಿಂತ ಹೆಚ್ಚಿನ ಮಳೆಯನ್ನೇ ಕಂಡಿದೆ. ಆದಾಗ್ಯೂ, ಕಳೆದ ಆರು ಎಲ್ ನಿನೊ ಸಂಭವಿಸಿದಾಗ, ಭಾರತವು ಸರಾಸರಿಗಿಂತ ಕಡಿಮೆ ಮಳೆಯನ್ನೇ ಕಂಡಿದೆ. ಅದರಲ್ಲೂ ಇತ್ತೀಚೆಗೆ ಜಾಗತಿಕ ತಾಪಮಾನ ಏರಿಕೆಯಿಂದ ಎಲ್ ನಿನೊ ಪ್ರಭಾವ ತಟ್ಟುತ್ತಿದೆ.
2009ರಲ್ಲಿ ಎಲ್ ನಿನೊ ಪ್ರಭಾವ ಕಡಿಮೆಯಿದ್ದರೂ ಭಾರತದಲ್ಲಿ ಅತಿ ಕಡಿಮೆ ಅಂದರೆ ಶೇ 78.2ರಷ್ಟು ಮಳೆಯಾಗಿತ್ತು. ಸುಮಾರು 37 ವರ್ಷಗಳಲ್ಲೇ ಕಡಿಮೆ ಮಳೆಯಾಗಿತ್ತು. ಈ ಬಾರಿ ಎಲ್ ನಿನೊ ಪರಿಣಾಮ ಬಲವಾಗಿರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಭಾರತಕ್ಕೆ ಮುಂಗಾರೇ ಬಲ
ಮುಂಗಾರಿನ ಸಮಯದಲ್ಲಿ ಭಾರತದಲ್ಲಿ ಶೇ 70 ರಷ್ಟು ಮಳೆಯಾಗುತ್ತದೆ. ಇದು ಕೃಷಿಗೆ ಆಧಾರ. ಉತ್ತಮ ಮಳೆ ಭಾರತದ 1.5 ಶತಕೋಟಿ ಜನರಲ್ಲಿ ಅರ್ಧದಷ್ಟು ಜನರಿಗೆ ಉದ್ಯೋಗ ನೀಡುತ್ತದೆ. ಸಾಮಾನ್ಯಕ್ಕಿಂತ ಕಡಿಮೆ ಮಳೆಯಾದರೆ ಅಕ್ಕಿ, ಹತ್ತಿ ಮತ್ತು ಸೋಯಾಬೀನ್‌ಗಳಂತಹ ಬೆಳೆಗಳ ಸಣ್ಣ ಕೊಯ್ಲು ಆಗಬಹುದು, ಆದರೆ ಮಣ್ಣಿನ ತೇವಾಂಶ ಕಡಿಮೆ ಇರುವುದರಿಂದ ಗೋಧಿ ಮತ್ತು ಸಾಸಿವೆಯಂತಹ ಚಳಿಗಾಲದ ಬೆಳೆಗಳ ಮೇಲೆಯೂ ಪರಿಣಾಮ ಬೀರುತ್ತದೆ.
ಬೆಳೆಗಳ ಉತ್ಪಾದನೆ ಕಡಿಮೆಯಾದಂತೆ ರಫ್ತು ಕಡಿಮೆಯಾಗುತ್ತದೆ. ಅಲ್ಲದೆ ತಾಳೆ ಎಣ್ಣೆ, ಸೋಯಾ ಎಣ್ಣೆಯಂತಹ ಪದಾರ್ಥಗಳ ಆಮದಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕಡಿಮೆ ಮಳೆ ವಿದ್ಯುತ್ ಉತ್ಪಾದನೆಯ ಮೇಲೆಯೂ ಪರಿಣಾಮ ಬೀರುತ್ತದೆ.

