HEALTH TIPS

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ: ಕೇಂದ್ರ, ಚುನಾವಣಾ ಆಯೋಗಕ್ಕೆ SC ನೋಟಿಸ್

 ನವದೆಹಲಿ: ಚುನಾವಣಾ ಅಕ್ರಮ ತಡೆಯಲು ಮತಗಟ್ಟೆಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆ (ಐರಿಸ್‌) ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆ ಜಾರಿಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 


ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿದಾರರ ವಾದವನ್ನು ಆಲಿಸಿದ ನಂತರ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.

'ಮತಕ್ಕಾಗಿ ಹಣದ ಆಮಿಷ, ಮತದಾರರ ಮೇಲೆ ಅನುಚಿತ ಪ್ರಭಾವ, ನಕಲಿ ಮತದಾನ ಸೇರಿದಂತೆ ಅಸ್ತಿತ್ವದಲ್ಲಿಲ್ಲದವರ ಹೆಸರಿನಲ್ಲಿ ನಡೆಯುವ ಮತದಾನವು ಇಂದಿಗೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ನಾಗರಿಕರಿಗೆ ಆಗುತ್ತಿರುವ ಹಾನಿ ಬಹಳ ದೊಡ್ಡದಾಗಿದೆ' ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿವೆ. ಗುರುತು ಪರಿಶೀಲನೆಯಲ್ಲಿ ಯಾವುದೇ ಲೋಪವಿದ್ದರೂ ಅದು ನೇರವಾಗಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 23(4)ರ ಅಡಿಯಲ್ಲಿ ಮಾನ್ಯತೆ ಪಡೆದಿರುವ ಆಧಾರ್ ಆಧಾರಿತ ಗುರುತಿನ ಚೀಟಿಯಂತೆಯೇ, ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬೆರಳಚ್ಚು ಮತ್ತು ಐರಿಸ್ ಬಯೋಮೆಟ್ರಿಕ್ ದೃಢೀಕರಣವನ್ನು ಜಾರಿಗೆ ತರಲು ಚುನಾವಣಾ ಆಯೋಗವು ಪರಿಗಣಿಸಬಹುದು.

ಬಯೋಮೆಟ್ರಿಕ್ ಗುರುತು ವಿಶಿಷ್ಟವಾಗಿದ್ದು, ನಕಲು ಮಾಡಲು ಸಾಧ್ಯವಿಲ್ಲ. ಇದು 'ಒಬ್ಬ ನಾಗರಿಕ, ಒಂದು ಮತ' ಎಂಬ ತತ್ವವನ್ನು ನೈಜ ಅರ್ಥದಲ್ಲಿ ಖಚಿತಪಡಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಬಯೋಮೆಟ್ರಿಕ್ ದೃಢೀಕರಣವು ಮತದಾನದ ಸಮಯದಲ್ಲಿ ಸುರಕ್ಷಿತ ಡಿಜಿಟಲ್ ದಾಖಲೆಗಳನ್ನು ರಚಿಸುತ್ತದೆ. ಇದು ಮತದಾನದ ರಹಸ್ಯವನ್ನು ಕಾಪಾಡುವುದರ ಜತೆಗೆ ಪ್ರತಿ ಮತಗಟ್ಟೆಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಾಗಿದೆಯೇ ಎಂದು ಪರಿಶೀಲಿಸಲು 'ಆಡಿಟ್ ಟ್ರಯಲ್' ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚುನಾವಣಾ ಅಕ್ರಮಗಳನ್ನು ತಡೆಯಲು ಸಹಕಾರಿಯಾಗುತ್ತದೆ.

ಚುನಾವಣಾ ಆಯೋಗವು ಸಂವಿಧಾನದ ವಿಧಿ 324ರ ಅಡಿಯಲ್ಲಿ ತನಗಿರುವ ಪೂರ್ಣ ಅಧಿಕಾರವನ್ನು ಬಳಸಿ, ಮತದಾರರ ಗುರುತಿಸುವಿಕೆಯನ್ನು ಬಲಪಡಿಸಲು ಮತ್ತು ಅಕ್ರಮಗಳನ್ನು ಹೋಗಲಾಡಿಸಲು ಈ ವ್ಯವಸ್ಥೆ ಜಾರಿಗೆ ತರಬಹುದು ಎಂಬುದು ಅರ್ಜಿದಾರರ ವಾದ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries