ನವದೆಹಲಿ: 2029ರಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಈ ವಾರ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮೂರು ದಿನಗಳ ವಿಶೇಷ ಅಧಿವೇಶನಕ್ಕೆ ಮುನ್ನ ದೆಹಲಿಯಲ್ಲಿ ಆಯೋಜಿಸಿರುವ 'ನಾರಿ ಶಕ್ತಿ ವಂದನ ಅಧಿನಿಯಮ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರುವ ಮೂಲಕ ಗತಕಾಲದ ಕನಸುಗಳನ್ನು ಸಾಕಾರಗೊಳ್ಳಿಸಲಾಗುತ್ತಿದ್ದು, ಭವಿಷ್ಯದ ಸಂಕಲ್ಪಗಳು ಈಡೇರಲಿವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ನಮ್ಮ ದೇಶದ ಸಂಸತ್ ಹೊಸ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿದೆ. ಈ ಇತಿಹಾಸವು ಹಳೆಯ ಕನಸುಗಳನ್ನು ನನಸಾಗಿಸುವ ಮೂಲಕ ಭವಿಷ್ಯದ ಸಂಕಲ್ಪಗಳನ್ನು ಪೂರೈಸುತ್ತದೆ. ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ನಮ್ಮ ಕೆಲಸ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಲಿದೆ' ಎಂದಿದ್ದಾರೆ.
2023ರಲ್ಲಿ ಈ ಕಾಯ್ದೆಯನ್ನು ಮಂಡಿಸಿದಾಗ ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿದ್ದವು. 2029ರ ವೇಳೆಗೆ ಇದನ್ನು ಜಾರಿಗೊಳಿಸಬೇಕೆಂದು ಎಲ್ಲರ ಸಾಮೂಹಿಕ ಬೇಡಿಕೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ರಾಜ್ಯ ವಿಧಾನಸಭೆಗಳಿಂದ ಹಿಡಿದು ದೇಶದ ಸಂಸತ್ತಿನವರೆಗೆ ದಶಕಗಳ ಕಾಯುವಿಕೆಯನ್ನು ಕೊನೆಗೊಳಿಸುವ ಸಮಯ ಬಂದಿದ್ದು, ಏಪ್ರಿಲ್ 16, 17 ಮತ್ತು 18ರಂದು ಇದು ಈಡೇರಲಿದೆ ಎಂದಿದ್ದಾರೆ.
2023ರಲ್ಲಿ ಹೊಸ ಸಂಸತ್ತಿನಲ್ಲಿ ನಾವು 'ನಾರಿ ಶಕ್ತಿ ವಂದನ ಅಧಿನಿಯಮ'ದ ರೂಪದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೆವು. ಇದೀಗ ದೇಶವು 21ನೇ ಶತಮಾನದ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಕಾಯ್ದೆ...
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು (ಮೂರನೇ ಒಂದು ಭಾಗ) ಸ್ಥಾನಗಳನ್ನು ಮೀಸಲಿಡಲು ಈ ಕಾಯ್ದೆ ಅವಕಾಶ ನೀಡುತ್ತದೆ.
ತಿದ್ದುಪಡಿ ಅಂಗೀಕಾರವಾದ ನಂತರ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದ್ದು, ಅದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ.
2029ರ ಲೋಕಸಭಾ ಚುನಾವಣೆಯಿಂದಲೇ ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 'ನಾರಿ ಶಕ್ತಿ ವಂದನ ಅಧಿನಿಯಮ'ಕ್ಕೆ ತಿದ್ದುಪಡಿ ಅಗತ್ಯವಿದ್ದು, ಅದಕ್ಕಾಗಿ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.

