ಗುರುಗ್ರಾಮ: ₹10 ಕೋಟಿ ರೂಪಾಯಿ ನೀಡುವಂತೆ ವಿದೇಶದ ವಾಟ್ಸ್‌ಆಯಪ್ ಸಂಖ್ಯೆಯಿಂದ ಹಿಂದಿಯ ಬಿಗ್‌ಬಾಸ್ ಒಟಿಟಿ-2 ವಿನ್ನರ್ ಎಲ್ವಿಶ್ ಯಾದವ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ.
ಸಂದೇಶ ಕಳುಹಿಸಿದವನು ತನ್ನನ್ನು ತಾನು ರಣದೀಪ್ ಮಲಿಕ್ ಎಂದು ಗುರುತಿಸಿಕೊಂಡಿದ್ದು, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ.
ಎರಡು ದಿನಗಳಲ್ಲಿ ಹಣ ನೀಡದಿದ್ದರೆ ಗುಂಡಿಕಿಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಲ್ವಿಶ್ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾದವ್ ದೂರಿನ ಮೇರೆಗೆ ಗುರುಗ್ರಾಮದ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದ ವಾಟ್ಸ್‌ಆಯಪ್ ಸಂಖ್ಯೆಯಿಂದ ಕರೆ ಬಂದಿತ್ತು. ಆಗ ನಾನು ರಿಸೀವ್ ಮಾಡಲಿಲ್ಲ. ಬಳಿಕ, ಅದೇ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಎಲ್ವಿಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ಸಂದೇಶ ಕಳುಹಿಸಿದ ವ್ಯಕ್ತಿ ತನ್ನನ್ನು ರಣದೀಪ್ ಮಲಿಕ್ ಎಂದು ಪರಿಚಯಿಸಿಕೊಂಡಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಎರಡು ದಿನಗಳಲ್ಲಿ ₹10 ಕೋಟಿ ಪಾವತಿಸುವಂತೆ ಬೇಡಿಕೆ ಇಟ್ಟಿದ್ದು, ಹಣ ಪಾವತಿಸದಿದ್ದರೆ ನನ್ನನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ'ಎಂದು ಯಾದವ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಅದೇ ಬೆದರಿಕೆ ಸಂದೇಶವನ್ನು ತಂದೆಯ ಮೊಬೈಲ್ ಸಂಖ್ಯೆಗೂ ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಕರೆಯ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.

