ಅಹಮದಾಬಾದ್: ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಬಿಡುಗಡೆಯಾದ ಬಳಿಕ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಾಲಿವುಡ್ ನಟ ಹೇಮಂತ್ ಮೋದಿ ಅಲಿಯಾಸ್ ಹೇಮಂತ್ ನಾಗಿನ್ ದಾಸ್ ಪುರುಷೋತ್ತಮ್ ದಾಸ್ ವೈಷ್ಣವ್ (53) ನನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್‌ನ ಘೀಕಾಂತ ಮೆಟ್ರೊ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2005ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ನರೇಂದ್ರ ಅಲಿಯಾಸ್ ನನ್ನೊ ಯಶ್ವಂತ್ ಕಾಂಬ್ಳೆ ಹತ್ಯೆಗೀಡಾಗಿದ್ದರು. ಈ ಪ್ರಕರಣದಲ್ಲಿ ಹೇಮಂತ್ ವೈಷ್ಣವ್ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಬಾಂಬೆ ಪೊಲೀಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆಗಸ್ಟ್ 27, 2008ರಂದು ಹೇಮಂತ್ ವೈಷ್ಣವ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಮೆಹ್ಸಾನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆತನಿಗೆ ಗುಜರಾತ್ ಹೈಕೋರ್ಟ್ ಜುಲೈ 25, 2014ರಂದು 30 ದಿನಗಳ ಪೆರೋಲ್ ಮಂಜೂರು ಮಾಡಿತ್ತು. ಆದರೆ ಪೆರೋಲ್ ಅವಧಿ ಪೂರ್ಣಗೊಂಡ ಬಳಿಕ ಆತ ಜೈಲಿಗೆ ಮರಳಿರಲಿಲ್ಲ. ಹೀಗಾಗಿ ಆತನನ್ನು ಪೆರೋಲ್ ಬಳಿಕ ತಪ್ಪಿಸಿಕೊಂಡ ಆರೋಪಿಯಾಗಿ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ತಪ್ಪಿಸಿಕೊಳ್ಳಲು ಆತ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲೇ ಸಕ್ರಿಯನಾಗಿದ್ದ ಎನ್ನಲಾಗಿದೆ. 'ಥಗ್ಸ್ ಆಫ್ ಹಿಂದೂಸ್ತಾನ್', 'ಜಯೇಶ್‌ಭಾಯಿ ಜೋರ್ದಾರ್' ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾನೆ. 'ವಾಗ್ಲೆ ಕಿ ದುನಿಯಾ' ದೂರದರ್ಶನ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೆ, 'ಲಾಹೋರ್ 1947' ಹಾಗೂ ಮಲಯಾಳಂ ಚಿತ್ರ 'ಎಲ್2: ಎಂಪುರನ್' ಚಿತ್ರಗಳಲ್ಲಿಯೂ ಆತ ನಟಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವರ್ಷಗಳ ಕಾಲ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದು, ಕಾನೂನು ಕ್ರಮ ಮುಂದುವರಿದಿದೆ.

