ತಿರುವನಂತಪುರಂ: ಸೋಮವಾರ ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ ಡಿ ಸತೀಶನ್ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆಗೆ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅನುಭವಿ ನಾಯಕರು, ಹೊಸಬರು, ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಸಮುದಾಯದ ನಾಯಕರು ಸತೀಶನ್ ಅವರ ಸಂಪುಟವನ್ನು ಸೇರಿದ್ದಾರೆ.
ಸತೀಶನ್ ನೇತೃತ್ವದ ಕೇರಳದ ನೂತನ ಸರಕಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಸನ್ನಿ ಜೋಸೆಫ್, ಐಯುಎಂಎಲ್ ಹಿರಿಯ ನಾಯಕ ಪಿ ಕೆ ಕುಂಞಾಲಿಕುಟ್ಟಿ, RSP ನಾಯಕ ಶಿಬು ಬೇಬಿ ಜಾನ್, ಮಾನ್ಸ್ ಜೋಸೆಫ್, ಅನೂಪ್ ಜೇಕಬ್, ಸಿ ಪಿ ಜಾನ್, ಐಯುಎಂಎಲ್ ನಾಯಕ ಎನ್ ಶಂಸುದ್ದೀನ್, ಕೆ ಎಂ ಶಾಜಿ, ಪಿ ಕೆ ಬಶೀರ್, ವಿ ಇ ಅಬ್ದುಲ್ ಗಫೂರ್, ಪಿ ಸಿ ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಟಿ ಸಿದ್ದಿಕ್, ಕೆ ಎ ತುಳಸಿ, ಒ.ಜೆ. ಜನೀಶ್, ಅಪು ಜಾನ್ ಜೋಸೆಫ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದರ ಜೊತೆಗೆ ಹಿರಿಯ ಶಾಸಕ ತಿರುವಂಚೂರು ರಾಧಾಕೃಷ್ಣನ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ನೇಮಿಸಲು ಯುಡಿಎಫ್ ನಿರ್ಧರಿಸಿದೆ, ಶಾನಿಮೋಳ್ ಉಸ್ಮಾನ್ ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರಮೇಶ್ ಚೆನ್ನಿತ್ತಲ:

ರಮೇಶ್ ಚೆನ್ನಿತ್ತಲ ಅವರು ಕಾಂಗ್ರೆಸ್ ನ ಅತ್ಯಂತ ಹಿರಿಯ ಶಾಸಕರಲ್ಲಿ ಒಬ್ಬರು. ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರಾಗಿದ್ದಾರೆ. 1982 ರಲ್ಲಿ ಮೊದಲು ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ 1986 ರಲ್ಲಿ 28 ನೇ ವಯಸ್ಸಿನಲ್ಲಿ ಸಚಿವರಾಗಿದ್ದರು. ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ KSU, ಯುವ ಕಾಂಗ್ರೆಸ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನಿತ್ತಲ ಅವರು 2014 ರಿಂದ 2016 ರವರೆಗೆ ಕಾಂಗ್ರೆಸ್ ಆಡಳಿತದಲ್ಲಿ ಗೃಹ ಸಚಿವರಾಗಿದ್ದರು ಮತ್ತು ನಂತರ ಪಿಣರಾಯಿ ವಿಜಯನ್ ಸರಕಾರದ ಮೊದಲ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಕೆ. ಮುರಳೀಧರನ್:
ಮಾಜಿ ಲೋಕಸಭಾ ಸಂಸದ ಕೆ. ಮುರಳೀಧರನ್, ಮಾಜಿ ಸಿಎಂ ಕೆ. ಕರುಣಾಕರನ್ ಅವರ ಪುತ್ರ. ಕೆ. ಮುರಳೀಧರನ್ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1989 ರಲ್ಲಿ ಕೋಝಿಕ್ಕೋಡ್ ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2004ರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾಗ ಎ ಕೆ ಆಂಟನಿ ಸಂಪುಟಕ್ಕೆ ವಿದ್ಯುತ್ ಇಲಾಖೆ ಸಚಿವರಾಗಿ ನೇಮಕಗೊಂಡಿದ್ದರು. ಆದರೆ ಉಪಚುನಾವಣೆಯಲ್ಲಿ ಸೋತ ಕಾರಣ ಆರು ತಿಂಗಳೊಳಗೆ ಅವರು ರಾಜೀನಾಮೆ ನೀಡಬೇಕಾಯಿತು.
ಸನ್ನಿ ಜೋಸೆಫ್:
ಸನ್ನಿ ಜೋಸೆಫ್ ಪ್ರಸ್ತುತ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರು 2011 ರಿಂದ ಕಣ್ಣೂರಿನ ಪೆರಾವೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಸಿಪಿಐ(ಎಂ) ನಾಯಕಿ, ಮಾಜಿ ಸಚಿವೆ ಕೆ ಕೆ ಶೈಲಜಾ ಅವರನ್ನು ಸೋಲಿಸಿದ್ದಾರೆ.
ಪಿ ಸಿ ವಿಷ್ಣುನಾಥ್:
ಪಿ ಸಿ ವಿಷ್ಣುನಾಥ್ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಕಾರಿ ಅಧ್ಯಕ್ಷರಲ್ಲಿ ಒಬ್ಬರು. ವಿಷ್ಣುನಾಥ್ 2006 ರಲ್ಲಿ ಆಲಪ್ಪುಝ ಜಿಲ್ಲೆಯ ಚೆಂಗನ್ನೂರಿನಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಆ ಸಮಯದಲ್ಲಿ ಅವರು ಆ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕರಲ್ಲಿ ಒಬ್ಬರಾಗಿದ್ದರು. ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗುವ ಮೊದಲು ಕೆಎಸ್ಯು ಮತ್ತು ಯುವ ಕಾಂಗ್ರೆಸ್ ನ ರಾಜ್ಯ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು 2021 ರಿಂದ ಕೊಲ್ಲಂ ಜಿಲ್ಲೆಯ ಕುಂದರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಂದು ಕೃಷ್ಣ:

(Photo credit: thenewsminute.com)
ಬಿಂದು ಕೃಷ್ಣ ಕೊಲ್ಲಂ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿದ್ದಾರೆ. ಪಕ್ಷದ ಅತ್ಯಂತ ಮುಂಚೂಣಿ ಮಹಿಳಾ ನಾಯಕಿಯರಲ್ಲಿ ಅವರು ಒಬ್ಬರಾಗಿದ್ದಾರೆ. ಹಿಂದೆ ಮೂರು ಚುನಾವಣೆಗಳಲ್ಲಿ ಸೋತಿದ್ದ ಬಿಂದು ಕೃಷ್ಣ, ಪ್ರಸ್ತುತ ಕೊಲ್ಲಂ ಡಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರ ಪತಿ ಎಸ್ ಕೃಷ್ಣ ಕುಮಾರ್, ತಿರುವನಂತಪುರದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಟಿ ಸಿದ್ದಿಕ್:
ಟಿ ಸಿದ್ದಿಕ್, ಪ್ರಿಯಾಂಕಾ ಗಾಂಧಿಯವರ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ ವಿಧಾನಸಭಾ ಕ್ಷೇತ್ರವಾದ ಕಲ್ಪೆಟ್ಟಾದಿಂದ ಎರಡು ಬಾರಿ ಶಾಸಕರಾಗಿದ್ದಾರೆ. ಮಾಜಿ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಸಿದ್ದಿಕ್, ಉಮ್ಮನ್ ಚಾಂಡಿ ಅವರ ಬೆಂಬಲದೊಂದಿಗೆ ಕಾಂಗ್ರೆಸ್ನಲ್ಲಿ ಮುನ್ನಲೆಗೆ ಬಂದವರು. 2019ರ ಲೋಕಸಭಾ ಚುನಾವಣೆಯಲ್ಲಿ, ಅವರನ್ನು ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಲಾಗಿತ್ತು. ಆದರೆ ಆ ಬಳಿಕ ಅವರು ರಾಹುಲ್ ಗಾಂಧಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು.
ಪಿ ಕೆ ಕುಂಞಾಲಿ ಕುಟ್ಟಿ

(Photo credit: thenewsminute.com)
ಪಿ ಕೆ ಕುಂಞಾಲಿ ಕುಟ್ಟಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)ನ ಹಿರಿಯ ನಾಯಕ. ಕಳೆದ ಮೂರು ದಶಕಗಳಿಂದ UDF ನ ಮುಂಚೂಣಿ ನಾಯಕರಲ್ಲಿ ಓರ್ವರಾಗಿದ್ದಾರೆ. 1991ರಿಂದ ಕೆ ಕರುಣಾಕರನ್, ಆಂಟನಿ ಉಮ್ಮನ್ ಚಾಂಡಿ ಮತ್ತು ಈಗ ಸತೀಶನ್ ಅವರ UDF ಸಚಿವ ಸಂಪುಟದ ಭಾಗವಾಗಿದ್ದಾರೆ. 1982ರಲ್ಲಿ 29ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಪಿ ಕೆ ಕುಂಞಾಲಿ ಕುಟ್ಟಿ 9 ಬಾರಿ ಶಾಸಕರಾಗಿದ್ದಾರೆ.
ಎನ್ ಸಂಶುದ್ದೀನ್:
ಎನ್ ಸಂಶುದ್ದೀನ್, IUML ರಾಜ್ಯ ಕಾರ್ಯದರ್ಶಿಯಾಗಿದ್ದು, 2011 ರಿಂದ ಪಾಲಕ್ಕಾಡ್ ನ ಮನ್ನಾರ್ಕಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶಂಶುದ್ದೀನ್ IUML ನ ವಿದ್ಯಾರ್ಥಿ ವಿಭಾಗ MSF ಅಥವಾ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಅವರು ರಾಜ್ಯ ರಾಜಕೀಯಕ್ಕೆ ತೆರಳುವ ಮೊದಲು ಮಲಪ್ಪುರಂ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಕೆ.ಎಂ. ಶಾಜಿ:

(Photo credit: twentyfournews.com)
ಕೆ.ಎಂ. ಶಾಜಿ ಅವರು 22 ನೇ ವಯಸ್ಸಿನಲ್ಲಿ ವಯನಾಡಿನ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಟು ವಿಮರ್ಶಕರಾಗಿಗಿದ್ದ ಅವರು, ಐಯುಎಂಎಲ್ ನ ವಿದ್ಯಾರ್ಥಿ ಮತ್ತು ಯುವ ಘಟಕದಲ್ಲಿ ಕಾರ್ಯ ನಿರ್ವಹಿಸಿದ್ದರು. 2011 ಮತ್ತು 2016ರಲ್ಲಿ ಅವರು ಕಣ್ಣೂರಿನ ಅಝಿಕೋಡ್ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ಸೋಲನುಭವಿಸಿದ್ದರು, ಈ ಬಾರಿ, ಅವರು ಮಲಪ್ಪುರಂ ಜಿಲ್ಲೆಯ ವೆಂಗಾರದಿಂದ ಗೆಲುವನ್ನು ಸಾಧಿಸಿದ್ದಾರೆ.
ಪಿ.ಕೆ. ಬಶೀರ್:
ಐಯುಎಂಎಲ್ ನಾಯಕನಾಗಿರುವ ಪಿ.ಕೆ. ಬಶೀರ್ ವಯನಾಡಿನ ಎರ್ನಾಡ್ ನ ಶಾಸಕರಾಗಿದ್ದಾರೆ. ಅವರು ದಿವಂಗತ ಐಯುಎಂಎಲ್ ಶಾಸಕ ಪಿ. ಸೀತಿ ಹಾಜಿ ಅವರ ಪುತ್ರನಾಗಿದ್ದಾರೆ. ಬಶೀರ್ ಗ್ರಾಮ ಪಂಚಾಯತ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ವಯನಾಡು ಭೂಕುಸಿತ ಸಂತ್ರಸ್ತರಿಗೆ ಐಯುಎಂಎಲ್ನ ಪುನರ್ವಸತಿ ಯೋಜನೆಯ ಉಸ್ತುವಾರಿಯನ್ನು ಬಶೀರ್ ವಹಿಸಿಕೊಂಡಿದ್ದರು.
ವಿ ಇ ಅಬ್ದುಲ್ ಗಫೂರ್:
ವಿ ಇ ಅಬ್ದುಲ್ ಗಫೂರ್ ಐಯುಎಂಎಲ್ ಪಕ್ಷದ ಮುಂಚೂಣಿ ನಾಯಕರಲ್ಲಿ ಒಬ್ಬರು. ವೃತ್ತಿಪರ ವಕೀಲರಾಗಿರುವ ಗಫೂರ್, 2021ರ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯ ಕಲಾಮಸ್ಸೇರಿಯಿಂದ ಹಿರಿಯ ಸಿಪಿಐ (ಎಂ) ನಾಯಕ ಮತ್ತು ಮಾಜಿ ಸಚಿವ ಪಿ ರಾಜೀವ್ ವಿರುದ್ಧ ಸೋತರು. ಆದರೆ ಈ ಬಾರಿ ಅವರು ತಮ್ಮ ತಂದೆ ಹಿಂದೆ ಪ್ರತಿನಿಧಿಸಿದ್ದ ಸ್ಥಾನವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು.
ಮೋನ್ಸ್ ಜೋಸೆಫ್:
ಮೋನ್ಸ್ ಜೋಸೆಫ್, ಕೇರಳ ಕಾಂಗ್ರೆಸ್ ನಾಯಕ. 2006 ರಿಂದ 2009 ರವರೆಗೆ LDF ಜೊತೆಗಿದ್ದಾಗ 22 ತಿಂಗಳುಗಳ ಕಾಲ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿದರು. 2006 ರಿಂದ ಅವರು ಕೊಟ್ಟಾಯಂನ ಕಾಡುತುರುತಿ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಅವರು ಕೇರಳ ಕಾಂಗ್ರೆಸ್ ನ ವಿದ್ಯಾರ್ಥಿ ವಿಭಾಗದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.
ಶಿಬು ಬೇಬಿ ಜಾನ್:
ಯುಡಿಎಫ್ ಸಂಪುಟದಲ್ಲಿ ಆರ್‌ಎಸ್ಪಿ ಭಾಗವಾಗಿರುವ ಶಿಬು ಬೇಬಿ ಜಾನ್, ಕಾಂಗ್ರೆಸ್ ಮತ್ತು ಎಡ ಸಂಪುಟಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ಬೇಬಿ ಜಾನ್ ಅವರ ಪುತ್ರ. ಶಿಬು ಹಿಂದಿನ ಯುಡಿಎಫ್ ಸರಕಾರದಲ್ಲಿ ಸಚಿವರಾಗಿದ್ದರು.
ಅನೂಪ್ ಜೇಕಬ್:
ಕೇರಳ ಕಾಂಗ್ರೆಸ್ (ಜಾಕೋಬ್) ಪಕ್ಷದ ಶಾಸಕ. ಮಾಜಿ ಸಚಿವ, ಕೇರಳ ಕಾಂಗ್ರೆಸ್ ನಾಯಕ ದಿವಂಗತ ಟಿ ಎಂ ಜಾಕೋಬ್ ಅವರ ಪುತ್ರ. ಅವರ ತಂದೆಯ ಮರಣದ ನಂತರ, ಅನೂಪ್ ಪಿರಾವೋಮ್ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಹಿಂದಿನ ಯುಡಿಎಫ್ ಸರಕಾರದಲ್ಲಿ ಅವರು ಸಚಿವರೂ ಆಗಿದ್ದರು.
ಎ.ಪಿ. ಅನಿಲ್ ಕುಮಾರ್:
ಎ.ಪಿ. ಅನಿಲ್ ಕುಮಾರ್ 2001 ರಿಂದ ಮಲಪ್ಪುರಂನ ವಂದೂರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ನ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರು. ಅವರು 2004 ರಿಂದ 2006 ರವರೆಗೆ ಮತ್ತು ನಂತರ 2011 ರಿಂದ 2016 ರವರೆಗೆ ಯುಡಿಎಫ್ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕೆ.ಎ. ತುಳಸಿ:
ಕೆ.ಎ. ತುಳಸಿ ಪಾಲಕ್ಕಾಡ್ ನ ಕೊಂಗಾಡ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿದ್ದಾರೆ. ಅವರು ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಅವರ ಪತ್ನಿ. ಕಾಂಗ್ರೆಸ್ ವಿದ್ಯಾರ್ಥಿ ರಾಜಕೀಯದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ತುಳಸಿ, 2000ರಲ್ಲಿ ತ್ರಿಶೂರ್ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಶ್ರೀಕಂದನ್ ಯುವ ಕಾಂಗ್ರೆಸ್ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ 2004 ರಲ್ಲಿ ಅವರನ್ನು ವಿವಾಹವಾದರು. ಪ್ರಸ್ತುತ, ಅವರು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಸಿ ಪಿ ಜಾನ್:

(Photo credit: madhyamam.com)
ಸಿ ಪಿ ಜಾನ್ ಅವರು ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇದು ಸಿಪಿಐ(ಎಂ) ಬಂಡಾಯ ಸಂಘಟನೆಯಾಗಿದ್ದು, ದಿವಂಗತ ಎಂ ವಿ ರಾಘವನ್ 1986 ರಲ್ಲಿ ಈ ಸಂಘಟನೆಯನ್ನು ಸ್ಥಾಪಿಸಿದ್ದರು. 1991 ರಲ್ಲಿ ಸಿಎಂಪಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಸೇರಿದಾಗಿನಿಂದ ಜಾನ್ ಯುಡಿಎಫ್ ನ ಭಾಗವಾಗಿದ್ದಾರೆ.
ಓ ಜೆ ಜನೀಶ್:
ಓ ಜೆ ಜನೀಶ್, ಅತ್ಯಂತ ಕಿರಿಯ ಕ್ಯಾಬಿನೆಟ್ ಸಚಿವ. ಜನೀಶ್ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದು, ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರಿನಿಂದ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲಿ ಆಯ್ಕೆಯಾದರು. ರಾಹುಲ್ ಮಮ್ಕೂಟತಿಲ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಬಳಿಕ ಜನೀಶ್ ಅವರಿಗೆ ರಾಜ್ಯದಲ್ಲಿ ಯುವ ಕಾಂಗ್ರೆಸ್ ಅನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು.
ರೋಜಿ ಎಂ ಜಾನ್:
ರೋಜಿ ಎಂ ಜಾನ್ ಕೇರಳದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕ. ಅವರು 2016 ರಿಂದ ಎರ್ನಾಕುಲಂನ ಅಂಗಮಲಿ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ.
ಕಾಂಗ್ರೆಸ್ ನ ವಿದ್ಯಾರ್ಥಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಎಂ ಲಿಜು:
ಎಂ ಲಿಜು ಆಲಪ್ಪುಝ ಜಿಲ್ಲೆಯ ಕಾಯಂಕುಲಂ ಸ್ಥಾನದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು.

