ಮುಂಬೈ: ಕೇಂದ್ರ ಸರ್ಕಾರಕ್ಕೆ 2.87 ಲಕ್ಷ ಕೋಟಿ ರೂಪಾಯಿ ಲಾಭಾಂಶವನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಒಪ್ಪಿಗೆ ನೀಡಿದೆ. ತುರ್ತು ಅಪಾಯ ಸಾಧ್ಯತೆಗಳ ನಿಧಿಗೆ ಹೆಚ್ಚಿನ ಹಣವನ್ನು ವರ್ಗಾಯಿಸಲು ನಿರ್ಧರಿಸಿದ ನಡುವೆಯೂ ಆದಾಯ ಹೆಚ್ಚಳ ಹಾಗೂ ಬ್ಯಾಲೆನ್ಸ್‌ಶೀಟ್ ವಿಸ್ತರಣೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 6.7ರಷ್ಟು ಹೆಚ್ಚುವರಿ ಲಾಭಾಂಶ ನೀಡಲು ಸಾಧ್ಯವಾಗಿದೆ.
ಈ ವರ್ಷ 1.09 ಲಕ್ಷ ಕೋಟಿ ರೂಪಾಯಿಗಳನ್ನು ತುರ್ತು ಅಪಾಯ ಸಾಧ್ಯತೆಯ ನಿಧಿಗೆ ವರ್ಗಾಯಿಸಲಾಗಿದೆ. ಇದು ಕಳೆದ ವರ್ಷ ವರ್ಗಾಯಿಸಿದ ಮೊತ್ತಕ್ಕಿಂತ ಶೇಕಡ 143ರಷ್ಟು ಅಧಿಕ. ಆರ್‌ಬಿಐ ನಿವ್ವಳ ಆದಾಯ ಶೇಕಡ 26ರಷ್ಟು ಏರಿಕೆ ಕಂಡು 3.96 ಲಕ್ಷ ಕೋಟಿ ರೂಪಾಯಿಗೆ ಏರಿದ್ದರಿಂದ ಲಾಭಾಂಶ ಗಣನೀಯವಾಗಿ ಹೆಚ್ಚಳವಾಗಿದೆ. ದೊಡ್ಡ ಮೊತ್ತವನ್ನು ತುರ್ತು ಅಪಾಯ ಸಾಧ್ಯತೆಯ ನಿಧಿಗೆ ವರ್ಗಾಯಿಸಿದ ಹೊರತಾಗಿಯೂ ಆರ್‌ಬಿಐ ಬ್ಯಾಲೆನ್ಸ್‌ಶೀಟ್‌ನಲ್ಲಿ ಈ ಉದ್ದೇಶಕ್ಕೆ ನೀಡುವ ಮೊತ್ತದ ಅನುಪಾತ ಕಳೆದ ವರ್ಷ ಇದ್ದ ಶೇಕಡ 7ಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 6.5ಕ್ಕೆ ಇಳಿದಿದೆ. 2026ರ ಮಾರ್ಚ್ 31ಕ್ಕೆ ಆರ್‌ಬಿಐ ಬ್ಯಾಲೆನ್ಸ್‌ಶೀಟ್ ಅನ್ನು ಶೇಕಡ 20.6ರಷ್ಟು ವಿಸ್ತರಿಸಿ 91,97,121.03 ಕೋಟಿ ರೂಪಾಯಿಗೆ ಹೆಚ್ಚಿಸಿರುವುದು ಇದಕ್ಕೆ ಕಾರಣ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಚಿನ್ನದ ಬೆಲೆ ಏರಿಕೆ, ಬಾಂಡ್ ಮತ್ತು ಫೋರೆಕ್ಸ್ ಮಾರುಕಟ್ಟೆ ಹಸ್ತಕ್ಷೇಪ, ದ್ರವ್ಯತೆ ನಿರ್ವಹಣೆ ಮತ್ತು ಕರೆನ್ಸಿ ನೋಟುಗಳ ಪ್ರಸರಣ ಹೆಚ್ಚಳದಿಂದಾಗಿ ಬ್ಯಾಲೆನ್ಸ್‌ಶೀಟ್ ವಿಸ್ತರಣೆ ಸಾಧ್ಯವಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಿಂದಾಗಿ ರಸಗೊಬ್ಬರ ಮತ್ತು ಅಡುಗೆ ಅನಿಲ ಸಬ್ಸಿಡಿ ಹೆಚ್ಚಳವಾಗುವ ಮತ್ತು ತೆರಿಗೆ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ವರ್ಗಾವಣೆಯು ಕೇಂದ್ರಕ್ಕೆ ವರದಾನವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಆರ್‌ಬಿಐನಿಂದ 3.16 ಲಕ್ಷ ಕೋಟಿ ಲಾಭಾಂಶ ನಿರೀಕ್ಷಿಸಿತ್ತು. ಕಳೆದ ಹಣಕಾಸು ವರ್ಷದಲ್ಲಿ ಇದು 3.05 ಲಕ್ಷ ಕೋಟಿ ಆಗಿತ್ತು.

