ಖಗಾಡಿಯಾ: ಬಿಹಾರದ ಖಗಾಡಿಯಾ ಜಿಲ್ಲೆಯಲ್ಲಿ ಸೋಮವಾರ ವೇಗವಾಗಿ ಬಂದ ಟ್ರಕ್ಕೊಂದು ಆಟೊಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ತಿಂಗಳ ನವಜಾತ ಶಿಶು ಸೇರಿದಂತೆ ಕನಿಷ್ಠ ಏಳು ಜನರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ಜಿಲ್ಲೆಯ ಮಾನ್ಸಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ -31ರಲ್ಲಿ ಅಪಘಾತ ಸಂಭವಿಸಿದೆ.
ಎರಡು ತಿಂಗಳ ಶಿಶು, ಒಬ್ಬ ಮಹಿಳೆ, ಒಬ್ಬ ಬಾಲಕ ಹಾಗೂ ನಾಲ್ವರು ಪುರುಷರು ಸೇರಿದಂತೆ ಮೃತಪಟ್ಟ ಎಲ್ಲರೂ ಆಟೋರಿಕ್ಷಾದಲ್ಲಿದ್ದರು.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕೆರೆದೊಯ್ಯಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಸದರ್) ಮುಕುಲ್ ಕುಮಾರ್ ರಂಬನ್ ಹೇಳಿದ್ದಾರೆ.
ವ್ಯಾನ್-ಟ್ರಕ್ ಡಿಕ್ಕಿ: ಹತ್ತು ಸಾವು
ಲಖೀಂಪುರ ಖೇರಿ (ಉತ್ತರ ಪ್ರದೇಶ): ಸಿಸೈಯಾ-ಲಖೀಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವ್ಯಾನ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖೀಂಪುರದಿಂದ ಸಿಸೈಯಾಗೆ ಪ್ರಯಾಣಿಸುತ್ತಿದ್ದ ವ್ಯಾನ್ ಉಂಚ್‌ಗಾಂವ್ ಮತ್ತು ಭರೆಹ್ತಾ ಗ್ರಾಮಗಳ ನಡುವೆ ತಲುಪಿದ್ದಾಗ ಅಪಘಾತ ಸಂಭವಿಸಿದೆ.
ವ್ಯಾನ್‌ನ ಚಾಲಕ ಸೇರಿದಂತೆ ಎಲ್ಲಾ 9 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಧೌರಹರಾ ವೃತ್ತ ಅಧಿಕಾರಿ ಶಂಶೇರ್ ಬಹದ್ದೂರ್ ಸಿಂಗ್ ಹೇಳಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಟೆಂಪೊ ಡಿಕ್ಕಿ: 11 ಸಾವು
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಸೋಮವಾರ ಟೆಂಪೋವೊಂದು ವೇಗವಾಗಿ ಬರುತ್ತಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದು 11 ಜನರು ಮೃತಪಟ್ಟು 20 ಜನರು ಗಾಯಗೊಂಡಿದ್ದಾರೆ. ದಹನು ತಾಲೂಕಿನ ಧನಿವಾರಿ ಗ್ರಾಮದ ಬಳಿ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಟೆಂಪೊ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

