ದಿ ಹೇಗ್: ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ರಕ್ಷಣಾ ಪಾಲುದಾರಿಕೆ ಬಲಗೊಳಿಸಲು, ವಿರಳ ಖನಿಜಗಳು ಮತ್ತು ಇತರ ಮಹತ್ವದ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು 17 ಒಪ್ಪಂದಗಳು ಏರ್ಪಟ್ಟಿವೆ.
ಎರಡೂ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ಭದ್ರತೆ, ಸೆಮಿಕಂಡಕ್ಟರ್, ಬಾಹ್ಯಾಕಾಶ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧ ಬಲಗೊಳ್ಳಲು ಈ ಒಪ್ಪಂದಗಳು ನೆರವಾಗಲಿವೆ.
ನೆದರ್ಲೆಂಡ್ಸ್, ಸ್ವೀಡನ್, ನಾರ್ವೆ, ಇಟಲಿ ದೇಶಗಳಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲೆಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಜತೆ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
'ಎರಡೂ ದೇಶಗಳು ಸಾಗಬೇಕಾದ ಗುರಿ, ಉದ್ದೇಶಗಳ ಕುರಿತು ಈ ವೇಳೆ ವಿಸ್ತೃತವಾಗಿ ಚರ್ಚೆ ನಡೆದಿದೆ. ತಂತ್ರಜ್ಞಾನ ವರ್ಗಾವಣೆ, ಜಂಟಿ ಉದ್ಯಮಗಳ ಸ್ಥಾಪನೆ ಮೂಲಕ ರಕ್ಷಣಾ ಉಪಕರಣಗಳು, ಘಟಕಗಳು ಸೇರಿದಂತೆ ಇತರ ವಸ್ತುಗಳ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ' ಎಂದು ಇಬ್ಬರೂ ನಾಯಕರು ಪ್ರತಿಪಾದಿಸಿದರು.
ಐರೋಪ್ಯ ದೇಶಗಳ ಪೈಕಿ ನೆದರ್ಲೆಂಡ್ಸ್, ಭಾರತಕ್ಕೆ ನಾಲ್ಕನೇ ಅತಿದೊಡ್ಡ ಹೂಡಿಕೆದಾರ ದೇಶವಾಗಿದೆ. ಆ ದೇಶದ 55.6 ಬಿಲಿಯನ್ ಡಾಲರ್ (ಸುಮಾರು ₹5.5 ಲಕ್ಷ ಕೋಟಿ) ವಿದೇಶಿ ನೇರ ಹೂಡಿಕೆ ಭಾರತದಲ್ಲಿದೆ.
ಪಶ್ಚಿಮ ಏಷ್ಯಾದ ಸ್ಥಿತಿ-ಗತಿ ಚರ್ಚೆ
ಇಬ್ಬರೂ ನಾಯಕರು ಮಾತುಕತೆ ವೇಳೆ ಪಶ್ಚಿಮ ಏಷ್ಯಾದಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ, ತೀವ್ರ ಕಳವಳ ವ್ಯಕ್ತಪಡಿಸಿದರು. ಪಶ್ಚಿಮ ಏಷ್ಯಾದಲ್ಲಿನ ಯುದ್ಧದಲ್ಲಿ ಜಾಗತಿಕ ಇಂಧನ ಪೂರೈಕೆ ಸರಪಳಿ ಮತ್ತು ವ್ಯಾಪಾರ ಜಾಲಕ್ಕೆ ಹೊಡೆತ ಬಿದ್ದಿರುವ ಬಗ್ಗೆ ಚರ್ಚಿಸಿದರು.
ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ನಿರ್ಬಂಧವಿಲ್ಲದೆ, ಮುಕ್ತ ಸಂಚಾರಕ್ಕೆ ಅವಕಾಶ ಇರಬೇಕು ಎಂದು ನಾಯಕರು ಪ್ರತಿಪಾದಿಸಿದರು.
ಇದೇ ವೇಳೆ ಇಬ್ಬರೂ ನಾಯಕರು ಉಕ್ರೇನ್-ರಷ್ಯಾ ಯುದ್ಧ ಮತ್ತು ಅಲ್ಲಿನ ಸ್ಥಿತಿಗತಿಗಳು ಮತ್ತು ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಿದರು.
ವಿಶ್ವಸಂಸ್ಥೆಯ ಚಾರ್ಟರ್, ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಉಕ್ರೇನ್ ಮತ್ತು ರಷ್ಯಾ ನಡುವೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ನಡೆಯಬೇಕು ಎಂದು ಪ್ರತಿಪಾದಿಸಿರುವ ಉಭಯ ನಾಯಕರು, ಈ ದಿಸೆಯಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪನೆಗೆ ನಡೆಯುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- ನರೇಂದ್ರ ಮೋದಿ, ಪ್ರಧಾನಿಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅಪಾರ ಅವಕಾಶಗಳಿವೆ. ಅದಕ್ಕಾಗಿ ಡಚ್ ಕಂಪನಿಗಳನ್ನು ಸ್ವಾಗತಿಸುತ್ತೇನೆ 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಜಟ್ಟೆನ್ ಬಲವಾಗಿ ಖಂಡಿಸಿದರು ಎಂದು ಜಂಟಿ ಹೇಳಿಕೆ ತಿಳಿಸಿದೆ. ಅಲ್ಲದೆ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದೂ ಅದು ಹೇಳಿದೆ. ಉಭಯ ದೇಶಗಳ ನಡುವಿನ ಸಂಬಂಧ ಒಂದು ದಶಕದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಭಾರತವು ನೆದರ್ಲೆಂಡ್ಸ್ ಅನ್ನು ಐತಿಹಾಸಿಕವಾಗಿ ತನ್ನ ಪ್ರಮುಖ ಪಾಲುದಾರ ದೇಶಗಳಲ್ಲಿ ಒಂದು ಎಂದು ಪರಿಗಣಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಕಲ್ಪಿಸುವ ವಿಚಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ನೆದರ್ಲೆಂಡ್ಸ್‌ಗೆ ಪ್ರಧಾನಿ ಮೋದಿ ಇದೇ ವೇಳೆ ಧನ್ಯವಾದ ಅರ್ಪಿಸಿದರು.ಪಹಲ್ಗಾಮ್ ದಾಳಿಗೆ ಖಂಡನೆ
ಪ್ರಧಾನಿ ಹೇಳಿದ್ದು
ಈ ವರ್ಷ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ವಾಗಿದೆ. ಇದು ಭಾರತ- ಯುರೋಪ್ ನಡುವಿನ ಸಂಬಂಧದಲ್ಲಿ ಹೊಸ ಸುವರ್ಣ ಯುಗವನ್ನು ಆರಂಭಿಸಿದೆ
ಭಾರತದಲ್ಲಿ 300ಕ್ಕೂ ಹೆಚ್ಚು ಡಚ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ನೆದರ್ಲೆಂಡ್ಸ್ 2ನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ
ಭಾರತವು ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದು, ಬಾಹ್ಯಾಕಾಶ, ಖನಿಜ ಮತ್ತು ಪರಮಾಣು ಇಂಧನ ಕ್ಷೇತ್ರವನ್ನು ಮುಕ್ತಗೊಳಿಸಿದೆ
ಉದ್ಯಮಗಳಿಗೆ ಸುಲಭವಾಗಿ ವ್ಯವಹಾರ ನಡೆಸಲು ಪೂರಕ ವಾದ ತೆರಿಗೆ ವ್ಯವಸ್ಥೆ ಮತ್ತು ಕಾರ್ಮಿಕ ಸಂಹಿತೆಯಲ್ಲಿ ಸುಧಾರಣೆ ತರಲಾಗಿದೆ
ಭಾರತ ಮತ್ತು ನೆದರ್ಲೆಂಡ್ಸ್ ದೇಶಗಳು ನಡುವೆ ವಿಶ್ವವಿದ್ಯಾಲಯಗಳ ಪಾಲುದಾರಿಕೆ, ಜಂಟಿಯಾಗಿ ಸಂಶೋಧನಾ ಮತ್ತು ಅಭಿವೃದ್ದಿ ಕಾರ್ಯಗಳು ನಡೆಯಲಿವೆ

