ವಾಷಿಂಗ್ಟನ್: ಯಶಸ್ವಿ ಚಂದ್ರಯಾನದ ನಂತರ, ಭೂಮಿಯ ನೈಸರ್ಗಿಕ ಉಪಗ್ರಹದಲ್ಲಿ ಶಾಶ್ವತ ನೆಲೆ ಸ್ಥಾಪಿಸುವ ಪ್ರಯತ್ನಗಳ ಭಾಗವಾಗಿ ನಾಸಾ ಮೂರು ಹಂತದ ಮಿಷನ್ ಅನ್ನು ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸಲು 20 ಬಿಲಿಯನ್ ಡಾಲರ್ ಮೊತ್ತದ ಯೋಜನೆಯನ್ನು ಅನಾವರಣಗೊಳಿಸಿದರು.
ಈ ಯೋಜನೆಯು ಚಂದ್ರನ ಅಪಾಯಕಾರಿ ಪರಿಸರದಲ್ಲಿ ವಾಸಿಸಲು ಮತ್ತು ಕಾರ್ಯನಿರ್ವಹಿಸುವ ಕೌಶಲ್ಯ ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗ ನಡೆಸಲು ರೋವರ್‌ಗಳು ಮತ್ತು ಡ್ರೋನ್‌ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಅಮೆರಿಕ ಚಂದ್ರನತ್ತ ಮರಳುತ್ತಿದೆ. ಚಂದ್ರನ ಅಂಗಳದಲ್ಲಿ ನೆಲೆ ನಿರ್ಮಾಣವಾಗಲಿದೆ. ಆಕಾಶದ ಜಗತ್ತಿನಲ್ಲಿ ಅಮೆರಿಕ ಮತ್ತು ಮಾನವರ ಮೊದಲ ನೆಲೆ ಇದಾಗಲಿದೆ ಎಂದು ಐಸಾಕ್‌ಮನ್ ಹೇಳಿದ್ದಾರೆ.
ಚಂದ್ರನಲ್ಲಿ ನೆಲೆ ಸ್ಥಾಪಿಸುವ ಗುರಿಯನ್ನು ನಾಸಾ ಈ ವರ್ಷದ ಮಾರ್ಚ್ ತಿಂಗಳಲ್ಲಿ ಘೋಷಿಸಿತ್ತು. 2028ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿಯನ್ನು ನಾಸಾ ಹೊಂದಿದೆ.
ಈ ವರ್ಷದ ಸೆಪ್ಟೆಂಬರ್‌ಗೆ ಮೊದಲು ಯೋಜಿಸಲಾಗಿರುವ ಮೂನ್ ಬೇಸ್-I ಮಿಷನ್‌ಗಾಗಿ ಬ್ಲೂ ಆರಿಜಿನ್‌ನ ಬ್ಲೂ ಮೂನ್ ಮಾರ್ಕ್ 1 ಎಂಡ್ಯೂರೆನ್ಸ್ ಲ್ಯಾಂಡರ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

