ತಿರುವನಂತಪುರ: ಕೇರಳಂನ ನೂತನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಮುಂದಿನ 48 ಗಂಟೆಗಳ ಒಳಗಾಗಿ ತೀರ್ಮಾನ ಹೊರಬೀಳಲಿದೆ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿದ್ದಾರೆ.
ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನನ್ನ ಪ್ರಕಾರ ಮುಂದಿನ 48 ಗಂಟೆಗಳ ಒಳಗಾಗಿ ತೀರ್ಮಾನ ಹೊರಬೀಳಲಿದೆ.
ಕಾಂಗ್ರೆಸ್ ಒಂದು ಪ್ರಜಾಪ್ರಭುತ್ವವಾದಿ ಪಕ್ಷ. ಹೈಕಮಾಂಡ್ ನಾಯಕರು ಶಾಸಕರು ಹಾಗೂ ಮೈತ್ರಿಕೂಟದ ಪಾಲುದಾರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ.
'ಹೈಕಮಾಂಡ್ ನಾಯಕರು ನಾಳೆ (ಮಂಗಳವಾರ) ಮಾಜಿ ಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಪೀಳಿಗೆಯ ನಾಯಕರು ಮುಂದೆ ಬರುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳು ನಡೆಯುತ್ತಿವೆ. ಇದು ಸಾಮಾನ್ಯ' ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಲಾಬಿ ಹೆಚ್ಚಿದೆ.
ವಿ.ಡಿ. ಸತೀಸನ್, ರಮೇಶ್ ಚೆನ್ನಿತ್ತಲ, ಕೆ.ಸಿ. ವೇಣುಗೋಪಾಲ್ ಅವರ ಬೆಂಬಲಿಗರು ರಾಜ್ಯದ ವಿವಿಧೆಡೆ ಮುಂದಿನ ಮುಖ್ಯಮಂತ್ರಿ ಎಂಬ ಹೊಕ್ಕಣೆಯುಳ್ಳ ತಮ್ಮ ನಾಯಕರ ಫ್ಲೆಕ್ಸ್, ಬ್ಯಾನರ್ ಹಾಕಿದ್ದಾರೆ. ಈ ಮೂವರ ಬೆಂಬಲಿಗರ ನಡುವೆಯೇ ಫ್ಲೆಕ್ಸ್ ಅಳವಡಿಸಲು ಪೈಪೋಟಿ ಏರ್ಪಟ್ಟಿದೆ.

